ಬೆಂಗಳೂರು:ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಚೇತನರು ಹಾಗೂ ಇತರ ರೀತಿಯ ಅಂಗವೈಕಲ್ಯತೆ ಹೊಂದಿರುವ ನೌಕರರಲ್ಲಿ ಶೇ.50ರಷ್ಟು ಮಂದಿ ಪರ್ಯಾಯ ದಿನಗಳ ಆಧಾರದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿ ಜನವರಿ 5 ರಂದು ಹೊರಡಿಸಿರುವ ಸುತ್ತೋಲೆಯನ್ನು ಮರು ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಓದಿ: ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ವಿಶೇಷ ಸಭೆ ಆರಂಭ
ಕರ್ನಾಟಕ ಅಂಧರ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ-ಮಂಡಳಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿಹೀನ ಹಾಗೂ ಇತರ ವಿಶೇಷ ಚೇತನ ಅಧಿಕಾರಿ, ಸಿಬ್ಬಂದಿ ಪರ್ಯಾಯ ದಿನಗಳ ಆಧಾರದ ಮೇಲೆ ಪ್ರತಿದಿನ ಶೇ.50ರಷ್ಟು ಮಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಜ.5 ರಂದು ಸುತ್ತೋಲೆ ಹೊರಡಿಸಿದೆ.
ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿರುವ ಪೀಠ, ಶೇ.50ರಷ್ಟು ವಿಶೇಷ ಚೇತನ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿರುವುದರ ಹಿನ್ನೆಲೆ, ನಮಗೆ ಅರ್ಥವಾಗುತ್ತಿಲ್ಲ. ಗರ್ಭಿಣಿಯರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಕೆಲಸ ಮಾಡಬಹುದು ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಹೀಗಿದ್ದರೂ ರಾಜ್ಯ ಸರ್ಕಾರ ವಿವೇಚನೆ ಬಳಸದೆ ಶೇ.50ರಷ್ಟು ಅಂಧ ಅಥವಾ ವಿಶೇಷ ಚೇತನ ನೌಕರರ ಹಾಜರಾತಿಗೆ ನಿರ್ದೇಶಿಸಿ ಸುತ್ತೋಲೆ ಹೊರಡಿಸಿದ್ದೇಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದೆ.