ಬೆಂಗಳೂರು:ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಮುನ್ಸೂಚನೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಮಾನ್ಸೂನ್ ಚುರುಕಾಗಿದೆ. ಅರಬ್ಬೀ ಸಮುದ್ರದ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಆಗಿದೆ. ಇದರಿಂದ ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 7 ರಿಂದ 11 ರವರೆಗೆ ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದರು.
ಹವಾಮಾನ ಮುನ್ಸೂಚನೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಕರಾವಳಿ ಜಿಲ್ಲೆಗಳಿಗೆ ಸೆ. 7, 9 ಹಾಗೂ 10 ರಂದು, ಕೆಲವು ಕಡೆ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಕೊಡಲಾಗಿದೆ. ಸೆ. 8 ಹಾಗೂ 11 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಸೆ. 7 ರಿಂದ 11 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಯಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಒಳನಾಡಿನಲ್ಲಿ ಸೆ. 7 ರಿಂದ 11 ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಬೀದರ್, ಕಲ್ಬುರ್ಗಿಯಲ್ಲಿ ಸೆ.8 ರಿಂದ 11 ರವರೆಗೆ ಕೆಲವು ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಸೆ.7 ಹಾಗೂ 8 ರಂದು ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ :ಕರಾವಳಿಯಲ್ಲಿ ಗಾಳಿಯ ವೇಗ ಪ್ರತೀ ಗಂಟೆಗೆ 45 ರಿಂದ 55 ಕಿ.ಮೀ ತಲುಪುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.