ಬೆಂಗಳೂರು:ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ರೈತರಿಂದ ಪ್ರತಿರೋಧ ಕಂಡುಬರುತ್ತಿದೆ. ಈ ಸಂಬಂಧ ಅನುಕೂಲಕರ ತೀರ್ಮಾನಕ್ಕೆ ಬರಲು ಅ.25ರ ನಂತರ ಮತ್ತೊಂದು ಸಭೆ ಕರೆಯಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಚರ್ಚಿಸಲು ರೈತ ಮುಖಂಡರು ಮತ್ತು ಸರ್ಕಾರದ ನಡುವೆ ಬುಧವಾರ ಖನಿಜ ಭವನದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯವಾಗಲಿಲ್ಲ. ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಭಾಗವಹಿಸಿ, ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರಾದ ಬೈಯಾರೆಡ್ಡಿ, ಚುಕ್ಕಿ ನಂಜುಂಡಸ್ವಾಮಿ ಮುಂತಾದವರು, ಭೂಸ್ವಾಧೀನವನ್ನು ವಿರೋಧಿಸಿ ಸುಮಾರು ಒಂದೂವರೆ ವರ್ಷದಿಂದಲೂ ಹೋರಾಟ ನಡೆಯುತ್ತಿದೆ. ಆದ್ದರಿಂದ, ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಮಾಡಬೇಕು. ಇದರಲ್ಲಿ ಹದಿಮೂರು ಹಳ್ಳಿಗಳ ನೂರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆ ಅಡಗಿದೆ ಎಂದು ಹೇಳಿದರು.
ಇವರ ಅಹವಾಲುಗಳನ್ನು ಆಲಿಸಿದ ಸಚಿವ ಪಾಟೀಲರು, ಇನ್ನು ಮೂರ್ನಾಲ್ಕು ದಿನಗಳಲ್ಲಿ ನೀವೆಲ್ಲರೂ ಮತ್ತೊಮ್ಮೆ ಸಭೆ ಸೇರಿ, ಒಮ್ಮತಕ್ಕೆ ಬನ್ನಿ. ಇದೇ 25ರ ನಂತರ ನಾವು ಇನ್ನೊಂದು ಸಭೆ ಏರ್ಪಡಿಸುತ್ತೇವೆ. ಅಲ್ಲಿ ನಿಮ್ಮ ಅಂತಿಮ ನಿರ್ಣಯ ತಿಳಿಸಿ. ಅಲ್ಲೂ ಬಗೆಹರಿಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ಹೋಗೋಣ ಎಂದು ಹೇಳಿದರು.