ಬೆಂಗಳೂರು: ರೈತರಿಂದ 20 ಕ್ವಿಟಾಲ್ ತೊಗರಿ ಖರೀದಿ ಮಾಡಬೇಕೆಂದು ಪ್ರತಿಪಕ್ಷ ಶಾಸಕರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಕಲಾಪದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, 2019-20ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ ಪ್ರತಿ ಕ್ವಿಂಟಾಲ್ ತೊಗರಿಯನ್ನು 5800 ರೂ.ಗೆ ಬೆಂಬಲ ಬೆಲೆಯಡಿ ಖರೀದಿ ಮಾಡುವಂತೆ ಕೇಂದ್ರ ಸರ್ಕಾರ ಕಳೆದ ವರ್ಷದ ಡಿಸೆಂಬರ್ 17ರಂದು ಸೂಚನೆ ನೀಡಿದೆ.
ಒಟ್ಟು ಖರೀದಿಯ ಗರಿಷ್ಠ ಮಿತಿ 1,82,875 ಮೆಟ್ರಿಕ್ ಟನ್‍ಗಳು. ನಫೆಡ್ ಮೂಲಕ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ 487 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಫೆ. 25ರ ಅಂತ್ಯದವರೆಗೆ ರಾಜ್ಯದಲ್ಲಿ 3,17,976 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅವರ ಪೈಕಿ 2,74,977 ರೈತರಿಂದ ಮಾ. 17ರವರೆಗೆ 24,76,553 ಕ್ವಿಂಟಾಲ್ ತೊಗರಿಯನ್ನು ಖರೀದಿ ಮಾಡಲಾಗಿದೆ. ನೋಂದಣಿಯಾದ ರೈತರ ಪೈಕಿ 42,990 ರೈತರಿಂದ 4,29,990 ಕ್ವಿಂಟಾಲ್ ತೊಗರಿ ಖರೀದಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಕೇಂದ್ರದ ಬೆಂಬಲ ಬೆಲೆಯ ಜೊತೆಯಲ್ಲಿ ರಾಜ್ಯ ಸರ್ಕಾರ 300 ರೂ. ಪ್ರಾತ್ಸಾಹಧನ ನೀಡುತ್ತಿದೆ. ಇದರಿಂದ ರೈತರಿಗೆ ಪ್ರತಿ ಕ್ವಿಂಟಾಲ್‍ಗೆ 6100 ರೂ. ದೊರೆಯುತ್ತಿದೆ. ಪ್ರತಿ ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಗೆ ಅವಕಾಶ ನೀಡುವಂತೆ ಜ. 30ರಂದು ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಖರೀದಿ ಮಿತಿ 2,27,500 ಮೆಟ್ರಿಕ್ ಟನ್‍ಗೆ ಹೆಚ್ಚಾಗಿದೆ. ಬಫರ್ ಸ್ಟಾಕ್ ಯೋಜನೆಯಡಿ 3.58 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮತಿ ಸಿಕ್ಕಿದೆ ಎಂದು ಹೇಳಿದರು.
ಕಲಾಪದಲ್ಲಿ ತೊಗರಿ ಖರೀದಿ ವಿಚಾರ ಪ್ರಸ್ತಾಪ ಇದಕ್ಕೆ ಸಂಬಂಧಿಸಿದಂತೆ ಶಾಸಕರಾದ ಯಶವಂತರಾಯಗೌಡ, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಈಶ್ವರ್ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ತೊಗರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ನೋಂದಣಿಗೆ ಇನ್ನೂ ಸಮಯಾವಕಾಶ ನೀಡಬೇಕು. ತೊಗರಿ ಖರೀದಿ ಮಿತಿಯನ್ನು 20 ಕ್ವಿಂಟಾಲ್‍ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಗರಂ ಆದ ಕಾಶೆಂಪೂರ್ : ಉಪ ಪ್ರಶ್ನೆಗಳಿಗೆ ಅವಕಾಶ ಸಿಗದೇ ಇದ್ದಾಗ ಅಸಮಾಧಾನಗೊಂಡ ಶಾಸಕ ಬಂಡೆಪ್ಪ ಕಾಶೆಂಪೂರ್ ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಸಚಿವ ಎಸ್.ಟಿ.ಸೋಮಶೇಖರ್ ಮಧ್ಯಪ್ರವೇಶಿಸಿ, ತೊಗರಿ ಬೆಳೆ ಬೆಳೆಯುವ ಜಿಲ್ಲೆಗಳ ಆಸಕ್ತ ಶಾಸಕರ ಜೊತೆ ಈಗಲೇ ಅಧಿಕಾರಿಗಳೊಂದಿಗೆ ಸೇರಿ ಸಭೆ ನಡೆಸಿ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.