ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರೀಯ ಪ್ರತಿಪಕ್ಷಗಳ ಎರಡನೇ ಹಂತದ ಸಭೆ ನಡೆಯಲಿದೆ. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.
ಯಾರೆಲ್ಲ ಭಾಗಿ?: ಕಾಂಗ್ರೆಸ್, ಎಎಪಿ, ಟಿಎಂಸಿ, ಡಿಎಂಕೆ, ಜೆಡಿಯು, ಎನ್ ಸಿಪಿ,ಕೇರಳ ಕಾಂಗ್ರೆಸ್( ಎಂ), ಕೇರಳ ಕಾಂಗ್ರೆಸ್( ಜೆ), ಆರ್ ಎಸ್ ಪಿ, ಫಾರ್ವರ್ಡ್ ಬ್ಲಾಕ್, ವಿಸಿಕೆ, ಎಂಡಿಎಂಕೆ, ಅಕಾಲಿದಳ, ಎಸ್ ಪಿ ಸೇರಿದಂತೆ 24 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ.
ಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರು: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ ಕೇಜ್ರೀವಾಲ್ ಹಾಗೂ ತೇಜಸ್ವಿ ಯಾದವ್, ಅಖಿಲೇಶ್ ಸಿಂಗ್ ಯಾದವ್, ಶರದ್ ಪವಾರ್ ಪಾಲ್ಗೊಳ್ಳುವ ಸಾಧ್ಯತೆ ಇದೆ.
ರಾಷ್ಟ್ರೀಯ ಪ್ರತಿಪಕ್ಷಗಳ ಎರಡನೇ ಸಭೆ ಇದಾಗಿದ್ದು, ಮೊದಲ ಸಭೆ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ನಗರಕ್ಕೆ ಆಗಮಿಸುವ ಎಲ್ಲ ಪ್ರತಿಪಕ್ಷಗಳ ಮುಖಂಡರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಜುಲೈ 18ರಂದು ಸೋನಿಯಾ ಗಾಂಧಿ ಪ್ರತಿಪಕ್ಷಗಳ ಮುಖಂಡರಿಗೆ ಔತಣಕೂಟ ಹಮ್ಮಿಕೊಂಡಿದ್ದಾರೆ.
ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ವಾಗತ: ನಗರದಲ್ಲಿ ಇಂದಿನಿಂದ ನಡೆಯಲಿರುವ ಯುಪಿಎ ನೇತೃತ್ವದ ಪ್ರತಿಪಕ್ಷಗಳ ಸಭೆಗೆ ಆಗಮಿಸುತ್ತಿರುವ ಪಕ್ಷದ ನಾಯಕರನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕೇಂದ್ರ ಸರ್ಕಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸರ್ಕಾರದ ವಿರುದ್ಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ವಿರೋಧಿಸಿರುವ ನಡೆ ಉತ್ತಮವಾದದ್ದು. ಬಿಜೆಪಿಯ ನಿರಂಕುಶ ಪ್ರಭುತ್ವವನ್ನು ರಾಷ್ಟ್ರದಿಂದ ಹೊಡೆದೋಡಿಸುವ ನಿಟ್ಟಿನಲ್ಲಿ ರಾಷ್ಟ್ರದ ಪ್ರತಿಪಕ್ಷಗಳೆಲ್ಲ ಒಂದುಗೂಡಿ ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸದಾ ಕೈ ಜೋಡಿಸುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆ ರಾಷ್ಟ್ರದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಂದಾಗಿ ಹೋರಾಟ ಮಾಡಿ ಮೋದಿ ಪ್ರಭುತ್ವವನ್ನು ರಾಷ್ಟ್ರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರು: ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದು ಹಾಕಿದ ಕನ್ನಡ ಪರ ಸಂಘಟನೆಗಳು