ಬೆಂಗಳೂರು : ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈಗ ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅಂಬಾನಿಯ ಮೂಲಕವೇ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೆ ಅಮೂಲ್‍ನ ಎಂಡಿಯಾಗಿದ್ದ ಆರ್ ಎಸ್ ಸೋಧಿ ಅವರನ್ನು ಆಪರೇಷನ್ ಮಾಡಿ ರಿಲಯನ್ಸ್ ಕಂಪನಿಗೆ ಸೇರಿಸಿಕೊಂಡಿದ್ದಾರೆ.
ಅಮಿತ್‍ಶಾ ಅವರು ರಾಜ್ಯಗಳಲ್ಲಿರುವ ಹಾಲು ಮಹಾಮಂಡಲಗಳನ್ನು ಒಗ್ಗೂಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮೂಲ್ ವಕ್ಕರಿಸಿಕೊಂಡಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರು ನಮ್ಮ ನಂದಿನಿಯನ್ನಷ್ಟೆ ಅಲ್ಲ ಅಮೂಲ್ ಅನ್ನು ಸಹ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರ ಬೆನ್ನೆಲುಬನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು 2020 ರಿಂದ ಹೇಳುತ್ತಲೇ ಬಂದಿದ್ದೇನೆ. ಸರ್ಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆ ಮತ್ತು ವಿರೋಧವನ್ನು ಬಿಜೆಪಿ ಸರ್ಕಾರ ಪರಿಗಣಿಸುವ ಬದಲು ರೈತರನ್ನು ಶತ್ರುಗಳು ಎಂದು ಭಾವಿಸಿ ಅವರ ಆರ್ಥಿಕ ಚೈತನ್ಯವನ್ನು ಮುರಿಯಲು ಸನ್ನದ್ಧವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ಗುಜರಾತಿನಲ್ಲಿ ಮಾಲ್ದಾರಿ ಎಂಬ ಪಶುಪಾಲಕ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು. ಯಾವುದಾದರೂ ಹಸು ನಗರಗಳಲ್ಲಿ ಕಾಣಿಸಿಕೊಂಡರೆ ಅದರ ಮಾಲೀಕನಿಗೆ 5000 ದಿಂದ 50000 ರೂಪಾಯಿ ದಂಡ ಹಾಕುವ, ವರ್ಷಗಟ್ಟಲೇ ಜೈಲಿಗೆ ಅಟ್ಟುವ ಕಾನೂನುಗಳನ್ನು ಗುಜರಾತಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಹಾಗೆಯೆ ಅಲ್ಲಿಯೂ ಕೂಡ ಗೋಮಾಳಗಳು, ಹುಲ್ಲುಗಾವಲುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.