ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಪ್ರತಿ ಸಾರಿ ಬಂದಾಗಲೂ ಕನ್ನಡಿಗರಿಗೆ ಆಘಾತ ಮಾಡಿಯೆ ಬರುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿದ್ದ ಯುಜಿಸಿ ಕಚೇರಿಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಮತ್ತೊಂದು ಹಕ್ಕು ಕಸಿದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಮಕ್ಕಳಿಗೆ ಹಾಗೂ ಅಧ್ಯಾಪಕರುಗಳು, ಕಾಲೇಜು, ವಿವಿಗಳ ಆಡಳಿತ ಮಂಡಳಿಯವರು ಇನ್ನು ಮುಂದೆ ಸಣ್ಣ ಸಣ್ಣ ಸಮಸ್ಯೆಗಳಾದರೂ ದೆಹಲಿಗೆ ಹೋಗಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ ಕಚೇರಿ ಬೆಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದರೂ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಸಣ್ಣ ಪ್ರತಿಭಟನೆಯನ್ನೂ ದಾಖಲಿಸಿಲ್ಲ. ಗುಜರಾತ್ ಮೂಲದ ಈ ಜೋಡಿ ರಾಜ್ಯದ ಪ್ರತಿಯೊಂದನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಧಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ಸ್ವಾಭಿಮಾನವನ್ನೇ ದರೋಡೆ ಮಾಡುತ್ತಿದ್ದರೂ ಉಸಿರೆ ಎತ್ತದೇ ರಾಜ್ಯದ 7 ಕೋಟಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ಎಂಬುದೊಂದು ರಾಜ್ಯವಿದೆ ಎಂದು ನೆನಪಾಗುವುದು ಚುನಾವಣೆಗಳು ಬಂದಾಗ ಅಥವಾ ಕರ್ನಾಟಕದಲ್ಲಿ ಸಂಪತ್ತಿದೆ ಅದನ್ನು ಲೂಟಿ ಮಾಡುವುದು ಹೇಗೆ? ಎಂಬ ಯೋಚನೆ ಬಂದಾಗ ಮಾತ್ರ. ರಾಜ್ಯದಲ್ಲಿ ರೈತರು ಬೆಳೆದ ಅಡಕೆ, ತೆಂಗು, ಕಬ್ಬು, ಮೆಣಸು, ಕಾಫಿ, ಭತ್ತ ಮುಂತಾದ ಬೆಳೆಗಳಿಗೆ ಬೆಲೆಗಳಿಲ್ಲ. ತೊಗರಿಗೆ ನೆಟೆ ರೋಗ ಬಂದಿದೆ. ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದು 30000ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿವೆ. ಸುಮಾರು 18 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ದಿನ ರೈತರಿಗೆ 6. 66 ಕೋಟಿಗಳಷ್ಟು ಆದಾಯ ನಷ್ಟವಾಗುತ್ತಿದೆ. ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಅತಿವೃಷ್ಟಿ, ಪ್ರವಾಹವು ರಾಜ್ಯದ ರೈತರನ್ನು ಕಾಡುತ್ತಿದೆ. ಇದರಿಂದ 1 ಲಕ್ಷ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಅಂದರೆ 3 ವರ್ಷಗಳಲ್ಲಿ 2.5 ಲಕ್ಷ ಎಕರೆಗಳಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. 2.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಬೆಳೆಗೆ ಮತ್ತು ಮನೆಗಳಿಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಅಷ್ಟು ಭೀಕರ ಮಳೆ ಹಾನಿಯಾದಾಗಲೂ ಪ್ರಧಾನಮಂತ್ರಿ ಮೋದಿಗಾಗಲಿ, ಅಮಿತ್ ಶಾ ಅವರಿಗಾಗಲಿ ಹೋಗಲಿ ಉಳಿದ ಯಾವುದೇ ಸಚಿವರಿಗಾಗಲಿ ಕರ್ನಾಟಕ ರಾಜ್ಯ ಎಂಬುದೊಂದಿದೆ ಎಂಬ ನೆನಪು ಬಂದಿತ್ತೆ? ಎಂದು ಪ್ರಶ್ನಿಸಿದ್ದಾರೆ.
ಅಸಂಖ್ಯಾತ ಜನ ಮರಣ ಹೊಂದಿದರು: 2020 ಮತ್ತು 2021 ರಲ್ಲಿ ರಾಜ್ಯವನ್ನು ಕಾಡಿದ ಭೀಕರ ಕೊರೊನಾಕ್ಕೆ ರಾಜ್ಯದಲ್ಲಿ 4.5 ರಿಂದ 5 ಲಕ್ಷ ಜನರು ದುರಂತದ ಸಾವಿಗೀಡಾದರು. ಇವರುಗಳಿಗೆ ಪರಿಹಾರವನ್ನೇ ಕೊಟ್ಟಿಲ್ಲ. ಮೋದಿ ಸರ್ಕಾರ ಕರ್ನಾಟಕದ ಜನರಿಗೆ ಸಿಗಬೇಕಾದ ಆಕ್ಸಿಜನ್ ಅನ್ನು ಕಿತ್ತುಕೊಂಡರು. ಆಕ್ಸಿಜನ್ ಸಿಗದೆ, ವೆಂಟಿಲೇಟರ್ ಸಿಗದೆ ಅಸಂಖ್ಯಾತ ಜನ ಮರಣ ಹೊಂದಿದರು. ಇದರ ಹೊಣೆಯನ್ನು ಯಾರು ಹೊರಬೇಕು?. ಕರ್ನಾಟಕದ ಪ್ರಬಲವಾದ 5 ಬ್ಯಾಂಕುಗಳನ್ನು ಮೋದಿ ಸರ್ಕಾರ ಕಿತ್ತುಕೊಂಡಿತು. ಇದರಿಂದ ಲಕ್ಷಾಂತರ ಕೋಟಿಗಳಷ್ಟು ನಮ್ಮ ಜನರ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತು.
ಮೈಸೂರು ಬ್ಯಾಂಕು, ಕೆನರಾಬ್ಯಾಂಕು, ಕಾರ್ಪೊರೇಷನ್‌ಬ್ಯಾಂಕು, ವಿಜಯಾಬ್ಯಾಂಕು ಹೀಗೆ ಎಲ್ಲ ಬ್ಯಾಂಕುಗಳೂ ಹೋದವು. ಈ ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕರ್ನಾಟಕದ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಈಗ ಉತ್ತರ ಭಾರತದವರೇ ತುಂಬಿ ಹೋಗಿದ್ದಾರೆ. ಈ ಅನ್ಯಾಯಕ್ಕೆ ಮೋದಿಯವರೆ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪಾಲಿಗೆ ಬಂದಿದ್ದ ಸಿಆರ್‌ಪಿಎಫ್ ಬೆಟಾಲಿಯನ್ನನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸಿದರು. ತಮಿಳಿನಂತೆ ಕನ್ನಡ ಭಾಷೆಯೂ ಶಾಸ್ತ್ರೀಯ ಭಾಷೆಯೆ. ಆದರೆ ತಮಿಳುನಾಡಿಗೆ ಕೊಡುವ ಅನುದಾನಗಳಲ್ಲಿ ಕಾಲುಭಾಗವನ್ನೂ ಕರ್ನಾಟಕಕ್ಕೆ ಕೊಡುತ್ತಿಲ್ಲವೆಂದು ಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಹೇಳಿದ್ದಾರೆ.
ಕರ್ನಾಟಕದಿಂದ ಮೋದಿ ಸರ್ಕಾರವು 3.5 ಲಕ್ಷ ಕೋಟಿ ರೂಪಾಯಿಗಳನ್ನು ದೋಚಿಕೊಂಡು ಹೋಗುತ್ತಿದೆ. ಆದರೆ, ರಾಜ್ಯಕ್ಕೆ ತೆರಿಗೆ ಹಂಚಿಕೆ ಮಾಡುತ್ತಿರುವುದು ಕೇವಲ 29 ಸಾವಿರ ಕೋಟಿ ಮಾತ್ರ. ತೆರಿಗೆ ಹಂಚಿಕೆ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಎರಡೂ ಸೇರಿದರೂ ಸಹ 50 ಸಾವಿರ ಕೋಟಿಗಳಿಗೆ ತಲುಪುತ್ತಿಲ್ಲ ಎಂದು ವಿವರಿಸಿದ್ದಾರೆ.