ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಬಲ ಪ್ರದರ್ಶನ ಹಾಗೂ ನಾಯಕತ್ವ ಸಾಬೀತುಪಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ರಥಯಾತ್ರೆ ನಡೆಸಲು ಚಿಂತನೆ ರೂಪಿಸಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಇದು ರಾಜ್ಯದಿಂದ ತೆರಳಿದ ತಕ್ಷಣವೇ ತಮ್ಮ ರಥಯಾತ್ರೆ ಸಂಬಂಧ ಕಾರ್ಯ ಯೋಜನೆ ರೂಪಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಗುವ ಕನಸನ್ನು ಸಾಕಷ್ಟು ನಾಯಕರು ಹೊಂದಿದ್ದು, ಇವರಲ್ಲಿ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಸಹ ಮುಂಚೂಣಿಯಲ್ಲಿ ಇದ್ದಾರೆ. ಇವರಿಗೆ ಪ್ರಬಲ ಪ್ರತಿಸ್ಪರ್ಧಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.
ಡಿಕೆಶಿ ಈಗಾಗಲೇ ಮೇಕೆದಾಟು ಪಾದಯಾತ್ರೆ ನಡೆಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಇದನ್ನು ಮೀರುವ ಮಟ್ಟದಲ್ಲಿ ಹಾಗೂ ಜನಪ್ರಿಯರಾಗಲು ಸಿದ್ದರಾಮಯ್ಯ ಯೋಜನೆ ರೂಪಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮನ್ನು ಬೆಂಬಲಿಸುವ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಸೇರಿದಂತೆ ಹಲವು ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನದ ಬಳಿಕ ರಥಯಾತ್ರೆ ನಡೆಸಿ ರಾಜ್ಯ ಸುತ್ತಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಗೆ ಪ್ರತಿತಂತ್ರವಾಗಿ ಬಿಜೆಪಿಯಿಂದ ಬೃಹತ್ ಒಬಿಸಿ ಸಮಾವೇಶ
ಪ್ರತಿಪಕ್ಷ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಆಗಿರುವ ಹಿನ್ನೆಲೆ ಸಾಕಷ್ಟು ಕಾಂಗ್ರೆಸ್ ನಾಯಕರ ಬೆಂಬಲ ಸಿದ್ದರಾಮಯ್ಯನವರಿಗೆ ಇದೆ. ಇದರ ಲಾಭ ಪಡೆದುಕೊಳ್ಳುವ ಮೂಲಕ ತಾವು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅನಿವಾರ್ಯ ನಾಯಕ ಎನಿಸಿಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಸ್ಥಾನಕ್ಕೆ ಪೈಪೋಟಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇರ ಸವಾಲು ಒಡ್ಡುತ್ತಿದ್ದು, ಈಗಾಗಲೇ ಮೇಕೆದಾಟು ಪಾದಯಾತ್ರೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಮೂಲ ಕಾಂಗ್ರೆಸ್ಸಿಗರೇ ಆಗಿರುವ ಜೊತೆಗೆ ಹೈಕಮಾಂಡ್ ನಾಯಕರ ಬೆಂಬಲವನ್ನು ಸಹ ಇವರು ಹೊಂದಿದ್ದು, ಅವಕಾಶ ಸಿಕ್ಕರೆ ಸಿದ್ದರಾಮಯ್ಯರನ್ನ ಮೀರಿ ಬೆಳೆಯುವ ಸೂಚನೆ ನೀಡುತ್ತಿದ್ದಾರೆ.