ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಬರ ಅಧ್ಯಯನವನ್ನು ಬಿಜೆಪಿ ನಾಯಕರು ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಶಾಸಕ ಗೋಪಾಲಯ್ಯ, ಮುನಿರಾಜು, ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ ಸೇರಿ ಕೆಲ ಪ್ರಮುಖರು ಜೊತೆಗಿದ್ದರು. ಶ್ರೀಗಳೊಂದಿಗೆ ಅಶೋಕ್ ಕೆಲಕಾಲ ಚರ್ಚೆ ನಡೆಸಿ ಮಾರ್ಗದರ್ಶನ ಪಡೆದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಶೋಕ್, "ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಬರ ಪರಿಹಾರ ಕಾರ್ಯಾಚರಣೆಯಲ್ಲಿ ಸರ್ಕಾರ ವಿಫಲವಾಗಿದೆ. ಹಾಗಾಗಿ ನಾಳೆಯಿಂದಲೇ ನಾವು ಬರ ಅಧ್ಯಯನ ಪ್ರವಾಸ ಮಾಡುತ್ತೇವೆ. ಬರಗಾಲದ ವಿಚಾರವಾಗಿ ಶಾಸಕರ ಜೊತೆ ಮಾತನಾಡಿದ್ದೇನೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಜೆಡಿಎಸ್ ಕೂಡ ಬೆಂಬಲ ನೀಡುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ನೀಡದೆ, ಕೇಂದ್ರದ ಕಡೆ ಬೆರಳು ಮಾಡುತ್ತಿದೆ. ಎಲ್ಲ ಶಾಸಕರಿಗೆ ಬರ ಅಧ್ಯಯನ ಮಾಡಿ ವರದಿ ಸಿದ್ಧ ಮಾಡಿಕೊಂಡು ಬರುವಂತೆ ಹೇಳಿದ್ದೇನೆ" ಎಂದರು.
"ಬರ ಅಧ್ಯಯನ ಪ್ರವಾಸದ ಬಗ್ಗೆ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗು ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜೊತೆ ಮಾತನಾಡಿದ್ದೇನೆ. ಒಂದು ತಂಡವಾಗಿ ನಾವೆಲ್ಲ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ಕಿವಿ ಹಿಂಡುವ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕಿದೆ. ಆದರೂ ಎಚ್ಚರವಾಗದಿದ್ದರೆ ಬೇರೆ ಮದ್ದು ಹುಡುಕುತ್ತೇವೆ" ಎಂದು ಆರ್ ಅಶೋಕ್ ಹೇಳಿದರು.