ದೊಡ್ಡಬಳ್ಳಾಪುರ: ಜಕ್ಕಲಮಡಗು ಜಲಾಯನ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕದ ಸ್ಥಾಪನೆಗೆ ಗ್ರಾಮ ಪಂಚಾಯಿತಿ ಮುಂದಾಗಿದೆ. ಇದರ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿದ ಗ್ರಾಮಸ್ಥರು ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದೆ. ಸೊತೇನಹಳ್ಳಿಯ ಅರಣ್ಯದಂಚಿನ ಪ್ರದೇಶದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಶುರು ಮಾಡಿತ್ತು. ಪಂಚಾಯತ್ ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ತರದೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಗ್ರಾಮಸ್ಥರು ಪಂಚಾಯತ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು.
ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ತೂಬಗೆರೆ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಯಾಗುತ್ತಿದೆ. ಈ ಪ್ರದೇಶದಲ್ಲಿ ಸುತ್ತಮುತ್ತಲಿನ ಐದಾರು ಗ್ರಾಮಗಳ ಜಾನುವಾರುಗಳು ಮೇವಿಗಾಗಿ ಬರುತ್ತವೆ. ಗ್ರಾಮಗಳಿಗೆ ನೀರು ಪೂರೈಸುವ ಬೋರ್ವೆಲ್ ಸಹ ಇದೇ ಪ್ರದೇಶದಲ್ಲಿದೆ. ಒಂದು ವೇಳೆ ಈ ಪ್ರದೇಶದಲ್ಲಿ ಕಸದ ವಿಲೇವಾರಿ ಘಟಕ ಪ್ರಾರಂಭವಾದರೆ ಸೊಳ್ಳೆ, ನೋಣಗಳ ಹಾವಳಿ ಹೆಚ್ಚಾಗುತ್ತೆ. ಜಾನುವಾರುಗಳು ಪ್ಲಾಸ್ಟಿಕ್ ತ್ಯಾಜ್ಯ ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಪಶುಸಂಗೋಪನೆಯನ್ನೇ ನಂಬಿರುವ ರೈತರು ಇದರಿಂದ ಸಂಕಷ್ಟಕ್ಕೆ ತುತ್ತಾಗುತ್ತಾರೆನ್ನುವುದು ಗ್ರಾಮಸ್ಥರ ಅಳಲಾಗಿದೆ.
ಈ ಪ್ರದೇಶ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಕ್ಕೆ ನೀರು ಪೂರೈಸುವ ಜಕ್ಕಲಮಡಗು ಜಲಾಯನ ಪ್ರದೇಶದಲ್ಲಿದೆ. ಕಸ ವಿಲೇವಾರಿ ಘಟಕದ ವಿಷ ನೇರವಾಗಿ ಡ್ಯಾಂಗೆ ಸೇರಲಿದೆ. ಇದರಿಂದ ಕುಡಿಯುವ ನೀರು ಸಹ ವಿಷವಾಗಲಿದೆ. ಭವಿಷ್ಯದಲ್ಲಿ ಅಂತರ್ಜಲ ಸಹ ವಿಷವಾಗಲಿದೆ ಎಂದು ಜನರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.