ಬೆಂಗಳೂರು :ವಿಧಾನ ಪರಿಷತ್ ಕಲಾಪ ಮರು ಆರಂಭವಾದರೂ ಆಡಳಿತ-ಪ್ರತಿಪಕ್ಷ ನಡುವಿನ ಗದ್ದಲ ಕಡಿಮೆ ಆಗಲಿಲ್ಲ. ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆಗೆ ಒತ್ತಾಯಿಸಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಅವಧಿಗೂ ಮುನ್ನ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿ ಪ್ರತಿಪಕ್ಷ ನಾಯಕರು ಗದ್ದಲ ನಡೆಸಿದರು. ಆಗ ಸಭಾಪತಿಗಳು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಿದರು.
ನಿಲುವಳಿ ಸೂಚನೆ ಮಂಡನೆಗೆ ಮುಂದಾದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಿರುದ್ಧ ಆಡಳಿತ ಪಕ್ಷ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಹರಿಪ್ರಸಾದ್ ಅವರು, ನಾಗಪುರವನ್ನು ಹಾವಿನಪುರ ಎಂದು ಉಚ್ಛರಿಸಿದಾಗ ಗದ್ದಲ ಮತ್ತೆ ಹೆಚ್ಚಾಯಿತು.
ಬಿಜೆಪಿ ನಮ್ಮಿಂದ ಸಾಕ್ಷಿ ಕೇಳಿದೆ, ಅದನ್ನು ತಿಳಿಸುತ್ತೇನೆ ಎಂದ ಹರಿಪ್ರಸಾದ್, ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ನಲ್ಲಿ ಬಂದ ವರದಿ ಓದಿದರು. ಹರಿಪ್ರಸಾದ್ ಅವರು ನಿಲುವಳಿ ಸೂಚನೆಗೆ ಸಂಬಂಧಿಸಿ ವಿಷಯಕ್ಕೆ ಸೀಮಿತವಾಗಿ ಮಾತನಾಡಬೇಕೆಂದು ನಿಯಮದಲ್ಲಿದೆ ಎಂದು ಸಚಿವ ಮಾಧುಸ್ವಾಮಿ ನಿಯಮ ಓದಿ ತಿಳಿಸಿದರು.
ತ್ರಿವರ್ಣ ಧ್ವಜದ ಬಗ್ಗೆ ಅರಿವು ಬಿಜೆಪಿಯವರಿಗೆ ಇಲ್ಲ ಎಂದಾಗ ಮತ್ತೆ ಗಲಾಟೆಯಾಯಿತು. ಬಳಿಕ ಸಿ ಎಂ ಇಬ್ರಾಹಿಂ ಮಾತನಾಡಿ, ನಿನ್ನೆ ಶೂನ್ಯವೇಳೆಯಲ್ಲಿ ಇದೇ ವಿಚಾರದ ಮೇಲೆ ಅವಕಾಶ ಕೋರಿದಾಗ ನೀಡಿದ್ದರೆ ಮುಗಿದು ಹೋಗುತ್ತಿತ್ತು. ಅನಗತ್ಯವಾಗಿ ಇಷ್ಟು ಗದ್ದಲಕ್ಕೆ ಅವಕಾಶ ಮಾಡಿಕೊಟ್ಟಿರಿ ಎಂದರು.
57 ವರ್ಷ ಇವರು ಆರ್ಎಸ್ಎಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂದಾಗ ಗದ್ದಲ ಹೆಚ್ಚಾಯಿತು. ನಿಲುವಳಿ ಸೂಚನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾದರೆ ಇದು ಪರಿಷತ್ ಗೌರವಕ್ಕೆ ಧಕ್ಕೆ ಆಗಲಿದೆ. ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಬೇಕೆಂದು ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.
ವಿಚಾರಕ್ಕೆ ಸೀಮಿತವಾಗಿ ಮಾತು ಮುಂದುವರಿಸಿದ ಹರಿಪ್ರಸಾದ್, ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ತ್ರಿವರ್ಣ ಧ್ವಜ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಕೇಳಿಯೂ ಸಿಎಂ ಅಮಾನತು ಮಾಡದೆ ಮೌನವಹಿಸಿದ್ದಾರೆ.
ಈ ಕಾಲಘಟ್ಟದ ಧ್ವಜವನ್ನು 1947ರಲ್ಲಿ ಭಾರತೀಯ ಸಂವಿಧಾನದಲ್ಲಿ ಒಪ್ಪಿದ್ದಾರೆ. ಅದನ್ನು ಒಪ್ಪುವುದು ನಮ್ಮ ಧರ್ಮ. ಬೇರೆಯದನ್ನು ರಾಷ್ಟ್ರಧ್ವಜ ಅನ್ನುವ ಭಾವನೆ ಕೆಲವರಿಗೆ ಇರಬಹುದು. ಇದರಿಂದ ರಾಷ್ಟ್ರಧ್ವಜದ ಮಹತ್ವ ವಿವರಿಸುತ್ತಿದ್ದೇನೆ ಎಂದಾಗ ಆಗ ಪ್ರತಿಪಕ್ಷ ನಾಯಕರ ವಿವರಣೆಗೆ ಆಡಳಿತ ಪಕ್ಷ ಸದಸ್ಯರ ಆಕ್ಷೇಪದ ಜೊತೆ ಜೆಡಿಎಸ್ ಸದಸ್ಯ ಭೋಜೆಗೌಡರು ಸಹ ಆಕ್ಷೇಪ ವ್ಯಕ್ತಪಡಿಸಿದರು.
ಚಿಕ್ಕ ಮಕ್ಕಳಿಗೂ ಧ್ವಜದ ಬಗ್ಗೆ ಗೊತ್ತಿದೆ. ಸಚಿವರ ವಿಷಯಕ್ಕೆ ಬನ್ನಿ ಎಂದು ಒತ್ತಾಯಿಸಿದರು. ರಾಷ್ಟ್ರಧ್ವಜದ ಬಗ್ಗೆ ಸದನದಲ್ಲಿ ಮಾತನಾಡುವುದು ಬೇಡ ಅಂದರೆ ರಾಜೀನಾಮೆ ಕೊಟ್ಟು ಹೋಗ್ತೀನಿ ಎಂದು ಪ್ರತಿಪಕ್ಷ ನಾಯಕರು ಹೇಳಿದರು. ಕಾಂಗ್ರೆಸ್, ಜೆಡಿಎಸ್ ಸದಸ್ಯರಲ್ಲೇ ಪರ-ಆಕ್ಷೇಪದ ದನಿ ಕೇಳಿ ಬಂತು.