ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿಂದು 2ನೇ ದಿನದ ಪ್ರತಿಪಕ್ಷಗಳ ಮಹಾಘಟಬಂಧನ್‌ ಸಭೆ; 48 ನಾಯಕರು ಭಾಗವಹಿಸುವ ನಿರೀಕ್ಷೆ

ಕಾಂಗ್ರೆಸ್​ ನೇತೃತ್ವದಲ್ಲಿ ಇಂದು ಎರಡನೇ ದಿನದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ಜಂಟಿ ಪ್ರತಿಪಕ್ಷಗಳ ಸಭೆ ನಡೆಯಲಿದೆ.

ಪ್ರತಿಪಕ್ಷಗಳ ಮಹಾಘಟಬಂಧನ್‌ ಸಭೆ
ಪ್ರತಿಪಕ್ಷಗಳ ಮಹಾಘಟಬಂಧನ್‌ ಸಭೆ

By

Published : Jul 18, 2023, 9:32 AM IST

ಬೆಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಣಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಸರ್ವ ಪ್ರತಿಪಕ್ಷಗಳ ಮಹಾಘಟಬಂಧನ್‌ ಸಭೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 13ರಂದು ಪಾಟ್ನಾದಲ್ಲಿ ಮೊದಲ ಸಭೆ ನಡೆಸಿದ್ದ ಪ್ರತಿಪಕ್ಷ ನಾಯಕರು ಇದೀಗ ಬೆಂಗಳೂರು ನಗರದಲ್ಲಿ ಸಭೆ ಸೇರಿದ್ದಾರೆ. ಇಲ್ಲಿನ ರೇಸ್‌ಕೋರ್ಸ್‌ ರಸ್ತೆಯ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ.

ಇಂದು ಶರದ್‌ ಪವಾರ್‌ ಭಾಗಿ :ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಅಭಿಷೇಕ್‌ ಬ್ಯಾನರ್ಜಿ, ಡೆರಿಕ್‌ ಓಬ್ರಿಯಾನ್‌, ಸಿಪಿಐನ ಡಿ.ರಾಜಾ, ಸಿಪಿಐಎಂ ಸೀತಾರಾಂ ಯೆಚೂರಿ, ಎನ್‌ಸಿಪಿಯಿಂದ ಶರದ್‌ ಪವಾರ್‌, ಜಿತೇಂದ್ರ ಅಹ್ವಾಡ್‌, ಸುಪ್ರಿಯಾ ಸುಳೆ, ಜೆಡಿಯು ನಿತೀಶ್‌ ಕುಮಾರ್‌, ಸಂಜಯ್‌ ಕುಮಾರ್‌ ಝಾ, ಡಿಎಂಕೆಯಿಂದ ಎಂ.ಕೆ. ಸ್ಟಾಲಿನ್‌, ಟಿ.ಆರ್‌.ಬಾಲು, ಆಪ್‌ನಿಂದ ಅರವಿಂದ ಕೇಜ್ರಿವಾಲ್‌, ಜೆಎಂಎಂನಿಂದ ಹೇಮಂತ್‌ ಸುರೇನ್‌, ಶಿವಸೇನಾ(ಉದ್ಧವ್‌ ಠಾಕ್ರೆ ಬಣ) ಉದ್ಧವ್‌ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್‌ ರಾವತ್‌, ಆರ್‌ಜೆಡಿ ಲಾಲು ಪ್ರಸಾದ್‌ ಯಾದವ್‌, ತೇಜಸ್ವಿ ಯಾದವ್‌, ಮನೋಜ್‌ ಝಾ, ಸಂಜಯ್‌ ಯಾದವ್‌, ಸಮಾಜವಾದಿ ಅಖಿಲೇಶ್‌ ಯಾದವ್‌, ರಾಮಗೋಪಾಲ್‌, ಜಾವೇದ್‌ ಅಲಿ ಖಾನ್‌, ಆಶಿಶ್‌ ಯಾದವ್‌, ನ್ಯಾಷನಲ್‌ ಕಾನ್ಫರೆನ್ಸ್‌- ಓಮರ್‌ ಅಬ್ದುಲ್ಲಾ, ಪಿಡಿಪಿಯಿಂದ ಮೆಹಬೂಬಾ ಮುಫ್ತಿ, ಸಿಪಿಐ(ಎಂಎಲ್‌) ದೀಪಂಕರ್‌ ಭಟ್ಟಾಚಾರ್ಯ, ಆರ್‌ಎಲ್‌ಡಿಯಿಂದ ಜಯಂತ್‌ ಸಿಂಗ್‌ ಚೌದರಿ, ಐಯುಎಂಎಲ್‌ನಿಂದ ಪಿ. ಕುನಲಿಕುಟ್ಟಿ, ಕೇರಳ ಕಾಂಗ್ರೆಸ್‌(ಎಂ)ನಿಂದ ಜೋಶ್‌ ಕೆ. ಮಣಿ, ಎಂಡಿಎಂಕೆಯಿಂದ ವೈಕೋ, ವಿಸಿಕೆಯಿಂದ ರವಿಕುಮಾರ್‌, ಆರ್‌ಎಸ್‌ಪಿಯಿಂದ ಎನ್‌.ಕೆ. ಪ್ರೇಮಚಂದ್ರನ್‌, ಕೇರಳ ಕಾಂಗ್ರೆಸ್‌ನಿಂದ ಪಿ.ಸಿ. ಜೋಸೆಫ್‌, ಕೆಎಂಡಿಕೆನಿಂದ ಈಶ್ವರನ್‌, ಎಐಎಫ್‌ಬಿಯಿಂದ ಜಿ. ದೇವರಾಜನ್‌ ಭಾಗಿಯಾಗಲಿದ್ದಾರೆ.

ಇಂದಿನ ಕಾರ್ಯಕ್ರಮದ ವಿವರ:ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11.10ರಿಂದ 6 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ, ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಹಾ ಮೈತ್ರಿಕೂಟದ ಸಭೆ ಅಂತ್ಯವಾಗಲಿದೆ. ನಂತರ ನಾಯಕರು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮೈತ್ರಿಕೂಟ ಸಭೆಯ ನಿರ್ಣಯ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಸಭೆಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಮಹತ್ವದ ನಿರ್ಧಾರಗಳ ಕುರಿತು ಗಮನಹರಿಸಿದರೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಉಪಸಮಿತಿ ರಚನೆ, ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನದ ಕೆಲಸ, ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಆಯೋಜನೆಗೆ ಉಪಸಮಿತಿ, ದೇಶಾದ್ಯಂತ ಎಲ್ಲಿ ಬೃಹತ್ ರ್ಯಾಲಿಗಳ ಆಯೋಜನೆ ಮಾಡಬೇಕು, ಸಮಾವೇಶಗಳನ್ನು ಎಲ್ಲಿ ಮಾಡಬೇಕು ಎಂಬ ಬಗ್ಗೆ ಚರ್ಚೆ, ಕೇಂದ್ರದ ವಿರುದ್ಧ ಯಾವ ರೀತಿ ಜನಾಂದೋಲನ ಮಾಡಬೇಕು, ಈ ಎಲ್ಲ ಕಾರ್ಯಕ್ರಮಗಳ ನಿರ್ವಹಣೆಯನ್ನು ಸಮಿತಿ ಮಾಡಲಿದೆ. ವಿಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆಯೂ ಗಂಭೀರ ಮಾತುಕತೆ ನಡೆಯಲಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಎನ್‌ಡಿಎ ಮಹಾಮೈತ್ರಿಯನ್ನು ಮಣಿಸಿ, ಮಹಾಘಟಬಂಧನ್‌ ಕೈ ಮೇಲಾಗುವಂತೆ ನೋಡಿಕೊಳ್ಳುವುದು ಈ ಸಭೆಯ ಉದ್ದೇಶ. ಇದು ಎರಡನೇ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಇನ್ನಷ್ಟು ಹಂತದ ಸಭೆ ನಡೆಯಲಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ?: ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಿಷ್ಟು..

ABOUT THE AUTHOR

...view details