ಬೆಂಗಳೂರು : ಮಹಾಘಟಬಂಧನ್ ನಾಯಕರ ಸಭೆ ನಡೆಯುತ್ತಿರುವ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ಸುತ್ತಮುತ್ತ ರಾಷ್ಟ್ರೀಯ ನಾಯಕರ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮೇರೆಗೆ ಎರಡನೇ ಸಭೆ ನಗರದ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆಯುತ್ತಿದೆ.
ಸಭೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರಿಕ್ ಓಬ್ರಿಯಾನ್, ಸಿಪಿಐನ ಡಿ.ರಾಜಾ, ಸಿಪಿಐಎಂ ಸೀತಾರಾಂ ಯೆಚೂರಿ, ಎನ್‌ಸಿಪಿ ಶರದ್ ಪವಾರ್, ಜಿತೇಂದ್ರ ಅಹ್ವಾಡ್, ಸುಪ್ರಿಯಾ ಸುಳೆ, ಜೆಡಿಯು ನಿತೀಶ್ ಕುಮಾರ್, ಸಂಜಯ್ ಕುಮಾರ್ ಝಾ, ಡಿಎಂಕೆಯ ಎಂ. ಕೆ. ಸ್ಟಾಲಿನ್, ಟಿ.ಆರ್. ಬಾಲು, ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಜೆಎಂಎಂ ಹೇಮಂತ್ ಸೊರೇನ್, ಶಿವಸೇನಾ(ಉದ್ಧವ್ ಠಾಕ್ರೆ ಬಣ) ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವತ್, ಆರ್‌ಜೆಡಿ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಸಂಜಯ್ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ರಾಮಗೋಪಾಲ್, ಜಾವೇದ್ ಅಲಿ ಖಾನ್, ಆಶಿಶ್ ಯಾದವ್, ನ್ಯಾಷನಲ್ ಕಾನ್ಫರೆನ್ಸ್- ಓಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಸಿಪಿಐ(ಎಂಎಲ್) ದೀಪಂಕರ್ ಭಟ್ಟಾಚಾರ್ಯ, ಆರ್‌ಎಲ್‌ಡಿಯ ಜಯಂತ್ ಸಿಂಗ್ ಚೌದರಿ, ಐಯುಎಂಎಲ್‌ನ ಪಿ. ಕುನಲಿಕುಟ್ಟಿ, ಕೇರಳ ಕಾಂಗ್ರೆಸ್(ಎಂ)ನ ಜೋಶ್ ಕೆ. ಮಣಿ, ಎಂಡಿಎಂಕೆಯ ವೈಕೋ, ವಿಸಿಕೆಯ ರವಿಕುಮಾರ್, ಆರ್‌ಎಸ್‌ಪಿಯ ಎನ್. ಕೆ. ಪ್ರೇಮಚಂದ್ರನ್, ಕೇರಳ ಕಾಂಗ್ರೆಸ್‌ನ ಪಿ.ಸಿ. ಜೋಸೆಫ್, ಕೆಎಂಡಿಕೆಯ ಈಶ್ವರನ್, ಎಐಎಫ್‌ಬಿಯ ಜಿ. ದೇವರಾಜನ್ ಭಾವಚಿತ್ರಗಳು ಹೋಟೆಲ್ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿಯೂ ರಾರಾಜಿಸುತ್ತಿದೆ.
ರಾಷ್ಟ್ರೀಯ ನಾಯಕರ ಆಗಮನ ಹಿನ್ನೆಲೆ ಆಂಗ್ಲ ಭಾಷೆ ಹಾಗೂ ಕೆಳಗಡೆ ಹಿಂದಿಯಲ್ಲಿ ಸ್ವಾಗತ ಕೋರುವ ಬರಹಗಳನ್ನು ಬರೆಯಲಾಗಿದೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿ ನಾಯಕರು ಹೋಟೆಲ್ಗೆ ಆಗಮಿಸುತ್ತಿರುವ ಹಿನ್ನೆಲೆ ಇವರು ಆಗಮಿಸುವ ರಸ್ತೆಯಲ್ಲಿ ಪೋಸ್ಟರ್‌ಗಳು ಅಲ್ಲಲ್ಲಿ ಕಾಣಿಸುತ್ತಿವೆ. ಹೋಟೆಲ್ ಮುಂಭಾಗ ಮಾತ್ರ ಬೃಹತ್ ಕಟೌಟ್ಗಳು ಹಾಗೂ ಬ್ಯಾನರ್ಗಳು ಕಾಣಸಿಗುತ್ತಿವೆ.
ಈಗಾಗಲೇ ಕನ್ನಡ ಪರ ಕಾರ್ಯಕರ್ತರು ಇಂಗ್ಲಿಷ್ ಹಾಗು ಹಿಂದಿ ಭಾಷೆಯಲ್ಲಿ ರಾರಾಜಿಸುತ್ತಿರುವ ಪೋಸ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪೋಸ್ಟರ್ಗಳಿಗೆ ಹಾನಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದರು. ನಿನ್ನೆ ಸಂಜೆ ಬಹುತೇಕ ನಾಯಕರು ಆಗಮಿಸಿದ್ದು, ಇಂದು ಬೆಳಗ್ಗೆ ಏನ್ಸಿಪಿ ಮುಖಂಡ ಶರದ್ ಪವಾರ್ ನಗರಕ್ಕೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ 11 ಗಂಟೆಗೆ ಸಭೆ ಆರಂಭವಾಗಿದ್ದು, ಮಧ್ಯಾಹ್ನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಮ್ಮಿಕೊಂಡಿರುವ ಔತಣಕೂಟದಲ್ಲಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಳಿಕ ನಾಯಕರು ಸಂಜೆ ನಾಲ್ಕು ಗಂಟೆಯವರೆಗೂ ಸಭೆ ನಡೆಸಿ ತೆರಳಲಿದ್ದಾರೆ. ತೆರಳುವ ಮುನ್ನ ಮಾಧ್ಯಮಗೋಷ್ಟಿ ನಡೆಸಿ ನಾಯಕರು ಸಭೆಯ ನಿರ್ಣಯವನ್ನು ತಿಳಿಸಲಿದ್ದಾರೆ.
ನಿತೀಶ್ ಕುಮಾರ್ ವಿರುದ್ಧ ಪೋಸ್ಟರ್ : 2024ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮಣಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ಪ್ರತಿಪಕ್ಷ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದರೆ, ಇನ್ನೊಂದೆಡೆ ಸಭೆಯಲ್ಲಿ ಭಾಗಿಯಾಗಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ಅನಾಮಿಕರು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.