ಬೆಂಗಳೂರು : ಕಾಂಗ್ರೆಸ್ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಷ್ಟ್ರೀಯ ವಿಪಕ್ಷಗಳ ಎರಡನೇ ಮಹಾಘಟಬಂಧನ ಸಭೆ ನಡೆಯುತ್ತಿದೆ. 25 ಪಕ್ಷಗಳ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಮಹಾಮೈತ್ರಿ ಸಭೆ ಆರಂಭವಾಗಿದೆ. ಆರು ಪ್ರಮುಖ ಅಂಶಗಳ ಮೇಲೆ ಸಭೆಯಲ್ಲಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಸಭೆ ಮಹತ್ವದ್ದಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಂಜಾಬ್ ಸಿಎಂ ಭಗವಂತ್ ಮಾನ್, ಎನ್ ಸಿಪಿ ವರಿಷ್ಠ ಶರದ್ ಪವಾರ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಲಾಲೂ ಪ್ರಸಾದ್ ಯಾದವ್, ಫಾರೂಕ್ ಅಬ್ದುಲ್ಲಾ, ಅಖಿಲೇಶ್ ಯಾದವ್, ಸೀತಾರಾಮ್ ಯೆಚೂರಿ, ಓಮರ್ ಅಬ್ದುಲ್ಲಾ, ಡಿ. ರಾಜ, ವೈಕೋ, ಉದ್ದವ್ ಠಾಕ್ರೆ, ಮೆಹಬೂಬಾ ಮುಫ್ತಿ ಸೇರಿದಂತೆ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ನಾಲ್ಕು ಹೆಸರುಗಳ ಬಗ್ಗೆ ಚರ್ಚೆ: ಮಹಾ ಮೈತ್ರಿಗೆ ಹೊಸ ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ನಾಲ್ಕು ಹೆಸರುಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆಯಾಗಿದೆ. ಇಂದಿನ ಸಭೆಯಲ್ಲಿ ಒಂದು ನೂತನ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಮಹಾಮೈತ್ರಿಗೆ ಪ್ರೊಗ್ರೆಸಿವ್ ಡೆಮಾಕ್ರೆಟಿಕ್ ಅಲಯನ್ಸ್ (ಪಿಡಿಎ), ಯುಪಿಎ 3, ನ್ಯಾಷನಲ್ ಪ್ರೊಗ್ರೆಸಿವ್ ಅಲಯನ್ಸ್ (ಎನ್ಪಿಎ) ಮತ್ತು ಇಂಡಿಯಾ ಪ್ರೊಗ್ರೆಸಿವ್ ಅಲಯನ್ಸ್ ಎಂಬ ನಾಲ್ಕು ಹೆಸರುಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಆರು ಅಂಶಗಳ ಬಗ್ಗೆ ಚರ್ಚೆ: ಸಭೆಯಲ್ಲಿ ಆರು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ರೂಪಿಸಲು ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ವಿಪಕ್ಷ ಮೈತ್ರಿಕೂಟಗಳ ಸೇತುವೆಯಾಗಿದ್ದು, ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನ ನಡೆಸುವ ಕೆಲಸ ಮಾಡಲಿದೆ.