ಬೆಂಗಳೂರು:ಈ ಹಿಂದೆ ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವ ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ಇದೀಗ ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಬರಲಿ ಎಂದು ಆಶಿಸುತ್ತಾರೆ ಎಂದು ಮತ್ತೊಮ್ಮೆ ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಪದೇ ಪದೆ ಅನ್ನದಾತರನ್ನು ಅವಮಾನಿಸುವುದು, ರೈತರ ಜೀವನ ಹಂಗಿಸುವುದು, ರೈತರ ಮೇಲೆ ದೌರ್ಜನ್ಯ ನಡೆಸುವುದು, ಕಾಂಗ್ರೆಸ್ ತನ್ನ ಸಂಸ್ಕೃತಿಯನ್ನಾಗಿ ಅಳವಡಿಸಿಕೊಂಡಂತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವ ಶಿವಾನಂದ ಪಾಟೀಲ್ರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ. ಈ ಹಿಂದೆಯೂ ಶಿವಾನಂದ ಪಾಟೀಲರು 'ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ' ಎಂದು ಅಮೂಲ್ಯ ರೈತ ಜೀವಗಳನ್ನು ಹಗುರವಾಗಿ ಪರಿಗಣಿಸಿ ಅಮಾನವೀಯ ಹೇಳಿಕೆ ನೀಡಿದ್ದ ನೆನಪು ಇನ್ನೂ ಹಸಿರಾಗಿರುವಾಗಲೇ, ಮತ್ತೆ ಅದೇ ದಾಟಿಯ ಅವರ ರೈತ ದ್ವೇಷಿ ಮಾತುಗಳು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತದೆ. 'ಬರಗಾಲ ಬರಲೆಂದೇ ಅಪೇಕ್ಷಿಸುತ್ತಾರೆ' ಎಂಬ ವಂಗ್ಯದ ಮಾತುಗಳು ರೈತರ ಮೇಲಿನ ಕ್ರೌರ್ಯದ ಮನಸ್ಥಿತಿ ಪ್ರತಿಬಿಂಬಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮೂಲಕ ಟೀಕಿಸಿದ್ದಾರೆ.
'ಪುಕ್ಸಟ್ಟೆ ಆಶ್ವಾಸನೆ' ನೀಡಿ ಅಧಿಕಾರಕ್ಕೆ ಬಂದವರು ನೀವು, ರೈತರಿಗೆ ಸರ್ಕಾರ ಏನೇ ನೀಡಿದರೂ ಅದು ಈ ರಾಜ್ಯದ ಅಭಿವೃದ್ಧಿಯ ಕಾಳಜಿಯೇ ಹೊರತೂ ಭಿಕ್ಷೆಯಲ್ಲ. ನಮ್ಮ ರೈತರು ಸ್ವಾಭಿಮಾನಿಗಳು, ಅವರು ಪರಿಹಾರಕ್ಕಾಗಿ ಕಾಯುವುದಿಲ್ಲ. ಬದಲಿಗೆ ರೈತರ ಕಷ್ಟಗಳಿಗೆ ಸ್ಪಂದಿಸುವ ಸರ್ಕಾರಗಳನ್ನು ಬಯಸುತ್ತಾರೆ. ಆದರೆ ಆಮಿಷಗಳನ್ನೊಡ್ಡಿ, ಅಧಿಕಾರಕ್ಕೆ ಬಂದು ನಿತ್ಯವೂ ಬೆಲೆ ಏರಿಕೆಯ ಬರೆ ಎಳೆಯುವ ನಿಮ್ಮನ್ನು ಶಾಶ್ವತವಾಗಿ ತಿರಸ್ಕರಿಸುವ ಕಾಲ ಹತ್ತಿರದಲ್ಲಿದೆ. ಈ ಕಾಂಗ್ರೆಸ್ ಸರ್ಕಾರ ‘ನಿರ್ದಯ ಸರ್ಕಾರ, ದಪ್ಪ ಚರ್ಮದ ಮಂತ್ರಿಗಳನ್ನು ಪೋಷಿಸುತ್ತಿರುವ ಸರ್ಕಾರವಾಗಿದೆ ತಮ್ಮ ಹೇಳಿಕೆಗೆ ಸಚಿವ ಶಿವಾನಂದ ಪಾಟೀಲರು ಈ ಕೂಡಲೇ ಕ್ಷಮೆ ಕೋರಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಮತ್ತೊಮ್ಮೆ ರೈತರಿಗೆ ಅಪಮಾನ:ರೈತರ ಆತ್ಮಹತ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದರೆ "ಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಯಾರಾದರೂ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ" ಎಂದು ಉಪಮುಖ್ಯಮಂತ್ರಿಗಳು ಉಡಾಫೆ ಮಾತಾಡುತ್ತಾರೆ. ಈಗ ಸಚಿವರು ಪರಿಹಾರದ ಹಣಕ್ಕಾಗಿ ಬರ ಬರಲಿ ಎಂದು ರೈತರು ಆಸೆ ಪಡುತ್ತಾರೆ ಎಂದು ಹಗುರವಾಗಿ ಮಾತನಾಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.