ಬೆಂಗಳೂರು:ಇಲ್ಲಿನ ತಾಜ್ ವೆಸ್ಟ್ಎಂಡ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವಿಪಕ್ಷಗಳ ಔತಣಕೂಟ ಮುಗಿದಿದ್ದು, ಎಲ್ಲ ನಾಯಕರು ತಮ್ಮ ತಮ್ಮ ನಿವಾಸಗಳತ್ತ ತೆರಳಿದರು. ನಾಳೆ 26 ವಿಪಕ್ಷಗಳ ನಾಯಕರು ಸಭೆ ಸೇರಲಿದ್ದು, ಚುನಾವಣಾ ತಂತ್ರಗಾರಿಕೆ ಮತ್ತು ಒಕ್ಕೂಟದ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ ಸಮಾನಮನಸ್ಕ ಪಕ್ಷಗಳು ಸೇರಿಕೊಂಡು ಸಾಮಾಜಿಕ ನ್ಯಾಯ, ರಾಷ್ಟ್ರಾಭಿವೃದ್ಧಿ ಆಧಾರದ ಮೇಲೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಜುಲೈ 17,18 ರಂದು ಎರಡು ದಿನ ಇಲ್ಲಿ ನಡೆಯುವ ವಿಪಕ್ಷಗಳ ಸಭೆಗೆ ಕಾಂಗ್ರೆಸ್ ಪೌರೋಹಿತ್ಯ ವಹಿಸಿದೆ. ಮೋದಿ ವಿರೋಧಿ ಒಕ್ಕೂಟ ರಚನೆಗಾಗಿ ಕಾಂಗ್ರೆಸ್, ಆಪ್, ಟಿಎಂಸಿ ಸೇರಿದಂತೆ 26 ವಿಪಕ್ಷಗಳು ಒಟ್ಟುಗೂಡಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಎದುರಿಸಲು ಕೈಜೋಡಿಸಿವೆ. ಇದರ ಭಾಗವಾಗಿ ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಮೊದಲ ವಿಪಕ್ಷಗಳ ಸಭೆ ನಡೆದಿದ್ದು, ಈಗ ಬೆಂಗಳೂರಿನಲ್ಲಿ 2ನೇ ಸಭೆ ಆಯೋಜಿಸಲಾಗಿದೆ.
ನಾಳೆ ತಾಜ್ವೆಸ್ಟ್ಎಂಡ್ನಲ್ಲಿ ಎಲ್ಲ ಪಕ್ಷಗಳ ಗಣ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು, ಚುನಾವಣಾ ರೂಪುರೇಷೆ, ರಣತಂತ್ರ ಮತ್ತು ಬಿಜೆಪಿಯನ್ನು ಸೋಲಿಸುವ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ, ಒಕ್ಕೂಟ ಬಲವರ್ಧನೆಗೆ ಬೇಕಾದ ಕಾರ್ಯಸೂಚಿಗಳ ಮೇಲೂ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್:ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ವಿಪಕ್ಷಗಳ ಸಭೆ ಉತ್ತಮವಾಗಿ ಆರಂಭವಾಗಿ, ಅರ್ಧದಷ್ಟು ಮುಗಿದಿದೆ. ಸಮಾನ ಮನಸ್ಕ ವಿರೋಧ ಪಕ್ಷಗಳು ಸಾಮಾಜಿಕ ನ್ಯಾಯ, ಅಭಿವೃದ್ಧಿ ಮತ್ತು ರಾಷ್ಟ್ರ ಕಲ್ಯಾಣದ ಕಾರ್ಯಸೂಚಿಯ ಮೇಲೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತವೆ. ದ್ವೇಷ, ವಿಭಜನೆ, ಆರ್ಥಿಕ ಅಸಮಾನತೆ, ಲೂಟಿಯ ನಿರಂಕುಶ ಮತ್ತು ಜನವಿರೋಧಿ ರಾಜಕಾರಣದಿಂದ ಭಾರತದ ಜನರನ್ನು ಮುಕ್ತಗೊಳಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.