ಬೆಂಗಳೂರು :ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಜಾರಿಗೆ ತರುವ ಮೂಲಕ ರೈತರ ಶವಪೆಟ್ಟಿಗೆಗೆ ಬಿಜೆಪಿ ಸರ್ಕಾರ ಕೊನೆಯ ಮೊಳೆ ಹೊಡೆಯುತ್ತಿದೆ. ಈಗಲೂ ಕಾಲ ಮಿಂಚಿಲ್ಲ ಬಿಲ್ ವಾಪಸ್ ಪಡೆದುಕೊಳ್ಳಿ ಎಂದು ಸರ್ಕಾರವನ್ನು ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಗ್ರಹಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು. ಈ ಬಿಲ್ ಮೂಲಕ ರೈತರ ಶವಪೆಟ್ಟಿಗೆಯ ಮೇಲೆ ನೀವು ಕೊನೆಯ ಮೊಳೆ ಹೊಡೆದು ಕೆಟ್ಟ ಪರಂಪರೆಗೆ ನಾಂದಿ ಹಾಡಲಿದ್ದೀರಿ. ಹಾಗಾಗಿ ಈ ಬಿಲ್ ಹಿಂಪಡೆಯಿರಿ, ಬೇಕಿದ್ದರೆ ಮತ್ತೊಂದು ಅಧಿವೇಶನ ಕರೆಯಿರಿ. ವಾಪಸ್ ಪಡೆದರೆ ರೈತರಿಗೆ ವರದಾನವಾಗಲಿದೆ ಎಂದರು.
ಕೃಷಿ ನಾಶ ಮಾಡುವ ಬಿಲ್ ಇದಾಗಿದೆ. ದೇಶದ ಅನ್ನದಾತರ ಬದುಕಿನ ಪ್ರಶ್ನೆ ಇದು. ರಾಜ್ಯದ ಮಟ್ಟಿಗೆ ಈ ಕಾನೂನು ಬಂದರೆ ರೈತರ ಪರಿಸ್ಥಿತಿ ಕೆಡಲಿದೆ. ನೀವೆಲ್ಲಾ ದಿಲ್ಲಿಯ ದೊರೆಗಳ ಆದೇಶ ಪಾಲನೆ ಮಾಡಬೇಕಿದೆ. ಆದರೂ ನೀವೆಲ್ಲಾ ಕೃಷಿ ಹಿನ್ನೆಲೆಯವರು, ನಿಮ್ಮ ಮನಃಸಾಕ್ಷಿ ಇದಕ್ಕೆ ಒಪ್ಪಲ್ಲ. ಆದರೂ ದಿಲ್ಲಿ ದೊರೆಗಳ ಆದೇಶಕ್ಕೆ ಮಣಿದಿದ್ದೀರಿ ಎಂದು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದರು.
ಈ ಕಾಯ್ದೆ ಬಂದರೆ ಬಹುರಾಷ್ಟ್ರೀಯ ಕಂಪನಿ ಮಾಲೀಕರು, ರಿಯಲ್ ಎಸ್ಟೇಟ್‌ನವರು, ಕಾಳ ಧನಿಕರು, ದೊಡ್ಡ ದೊಡ್ಡ ಶ್ರೀಮಂತರು ಕೃಷಿ ಭೂಮಿ ಖರೀದಿ ಮಾಡಲಿದ್ದಾರೆ. ಇಲ್ಲಿ ಕಪ್ಪುಹಣ ಬಿಳಿ ಹಣವಾಗಿ ಪರಿವರ್ತನೆ ಆಗಲಿದೆ. ಭ್ರಷ್ಟಾಚಾರದಿಂದ ಗಳಿಸಿದವರು, ಅಕ್ಕಪಕ್ಕದ ರಾಜ್ಯದ ಸಿರಿವಂತರು ನಮ್ಮ ಕೃಷಿ ಭೂಮಿಗೆ ಕೈ ಹಾಕಲಿದ್ದಾರೆ. ಹಾಗಾಗಿ ಏನಾದರೂ ನೆಪ ಹೇಳಿ ಇದನ್ನು ಮುಂದಕ್ಕೆ ಹಾಕಿ, ಆತ್ಮಸಾಕ್ಷಿಗೆ ವಿರುದ್ಧ ಕೆಲಸ ಮಾಡಬೇಡಿ ಎಂದರು.
ಓದಿ: ಕರ್ನಾಟಕ ಸ್ಟಾಂಪ್ ವಿಧೇಯಕ ಮಂಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ
ರೈತರು ಭೂಮಿ ತಾಯಿಯ ಮಕ್ಕಳು. ಆದರೆ, ಈಗ ಕಾಯ್ದೆ ರೈತರಿಂದಭೂಮಿಯನ್ನು ಕಸಿದುಕೊಂಡರೆ ತಾಯಿ-ಮಕ್ಕಳನ್ನು ಬೇರೆ ಮಾಡಿದಂತಾಗಲಿದೆ. ಈ ಸದನದಲ್ಲಿ ನನ್ನ 23 ವರ್ಷದ ಅನುಭವದಲ್ಲಿ ಇಂತಹ ಸ್ಥಿತಿ ನೋಡಿಯೇ ಇಲ್ಲ ಎಂದರು. ಸಿಎಂ ಮನಸ್ಸಿನಲ್ಲೂ ಈ ಕಾಯ್ದೆ ಜಾರಿಗೆ ಮನಸ್ಸಿಲ್ಲ, ಬಹಳ ಶ್ರಮ ಪಟ್ಟು 4ನೇ ಬಾರಿ ಸಿಎಂ ಆಗಿದ್ದಾರೆ. ನಮ್ಮ 17 ಜನರನ್ನು ತೆಗೆದುಕೊಂಡು ಸರ್ಕಾರ ಮಾಡಿದ್ದಾರೆ, ದೊಡ್ಡ ಪ್ರಮಾಣದ ಹೂಡಿಕೆ ಮಾಡಿದ್ದಾರೆ. ಹೈಕಮಾಂಡ್ಗೆ ಉತ್ತರ ಹೇಳಬೇಕು ಎನ್ನುವ ಒತ್ತಡ ಇವರ ಮೇಲೆ ಇದೆ, ಈಗಲೂ ಕಾಲ ಮಿಂಚಿಲ್ಲ ಬಿಲ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ರೈತರು ರೈತರೇ, ಯಾವ ಪಕ್ಷಕ್ಕೂ ಸೇರಿದವರಲ್ಲ :ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಭೂ ಸುಧಾರಣಾ ತಿದ್ದುಪಡಿ ವಿಧೇಯಕ ರೈತರ ಪಾಲಿಗೆ ಮರಣ ಶಾಸನವಾಗಲಿದೆ. ಕಂದಾಯ ಸಚಿವರ ತರಾತುರಿ ನೋಡಿದ್ರೆ ಚರ್ಚೆ ನಡೆಯುವುದು ಬೇಕಿಲ್ಲದಂತಿದೆ. ಇಲ್ಲಿ ಬಿಲ್ ಸೋತರೂ ಪರವಾಗಿಲ್ಲ, ವಿಧಾನಸಭೆಯಲ್ಲಿ ಪಾಸ್ ಮಾಡಿಕೊಳ್ಳುತ್ತೇವೆ ಎನ್ನುವ ಧೋರಣೆ ತಳೆದಂತಿದೆ. ಕಾಂಗ್ರೆಸ್, ಬಿಜೆಪಿ, ಜನತಾದಳ, ಕಮ್ಯುನಿಷ್ಟ್ ಪಕ್ಷದ ರೈತರಿಲ್ಲ. ರೈತರು ಕೇವಲ ರೈತರು ಮಾತ್ರ, ರೈತರ ಹಿತ ಬಲಿಕೊಡುವ ಈ ಕಾಯ್ದೆ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಕೃಷಿ ಭೂಮಿ ಕಸಿದು ರೈತರನ್ನು ನಕ್ಸಲೈಟ್ ಮಾಡಬೇಡಿ :ನಂತರ ಆರ್ ಬಿ ತಿಮ್ಮಾಪೂರ್ ಮಾತನಾಡಿ, ನೀರಾವರಿ ಜಮೀನು ಅಂದರೆ ಡೆಫೆನೇಷನ್ ಹೇಳಿ, ನಮ್ಮಲ್ಲಿ ನೂರು ಅಡಿಗೆ ನೀರು ಬರುತ್ತದೆ. ಕೋಲಾರದಲ್ಲಿ ಸಾವಿರ ಅಡಿಗೂ ಸಿಕ್ಕಲ್ಲ. ಬೋರ್‌ವೆಲ್ ತೆಗೆಯದ, ನೀರು ಸಿಕ್ಕದ ರೈತ ಕೃಷಿಕ ಆಗಬಾರದು, ಅವರೆಲ್ಲಾ ಜಮೀನು ಮಾರಬೇಕಾ?. ನೀರಾವರಿ ಜಮೀನು ನೀರಾವರಿಗೆ ಎಂದು ಹೇಳುತ್ತಿದ್ದೀರಿ, ಕೃಷಿ ಭೂಮಿಯನ್ನು ನೀರಾವರಿ ಜಮೀನಾಗಿ ಮಾಡದವರು ರೈತರಾಗಬಾರದು.
ಬಡವ, ದಲಿತ, ಸಣ್ಣ ರೈತರಿಗೆ ಅನ್ಯಾಯವಾಗಲಿದೆ. ಆಂಧ್ರದಲ್ಲಿ ಏನಾಗಿದೆ ನೋಡಿ, ಜಮಿನ್ದಾರರ ಪಕ್ಕದಲ್ಲಿ ಐದು ಎಕರೆ ಜಮೀನಿದ್ದರೆ ಅವರನ್ನು ಕೊಲೆ ಮಾಡಲಾಗುತ್ತಿದೆ. ಇಲ್ಲವೇ ಕಿರುಕುಳಕ್ಕೆ ಅವರು ನಕ್ಸಲೈಟ್ ಆಗುತ್ತಿದ್ದಾರೆ. ನಮ್ಮಲ್ಲೂ ಅಂತಹ ಬಡ ರೈತರನ್ನು ನಕ್ಸಲೈಟ್ ಆಗಲು ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ನೀರಾವರಿ ಯೋಜನೆಗಳೆಲ್ಲಾ ಕಾರ್ಪೊರೇಟ್ ಕಂಪನಿಗಳಿಗೆ ಮಾಡಬೇಕಾ?. ನೀರಾವರಿ ಡೆಫೆನೇಷನ್ ತೆಗೆದು ಹಾಕಿ, 10 ಎಕರೆವರೆಗೂ ಇರುವವರ ಭೂಮಿ ಖರೀದಿ ಮಾಡದಂತೆ ರೂಪಿಸಿ ಎಂದರು. ಇದರಲ್ಲಿ ಭಾರಿ ಹುನ್ನಾರ ನಡೆದಿದ್ದು, ಇದರ ಚರ್ಚೆಗೆ ಟೈಂ ಫಿಕ್ಸ್ ಮಾಡಿ ಅಂತೀರಾ?. ಹಸಿರು ಶಾಲು ಹಾಕಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಯಡಿಯೂರಪ್ಪ, ಕೃಷಿ ಭೂಮಿಯಿಂದ ದಲಿತ, ಬಡ, ಸಣ್ಣ ರೈತರನ್ನು ಹೊರಗೆ ಹಾಕಿ ಐಶಾರಾಮಿ ಬದುಕು ನಡೆಸುವವರಿಗೆ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸಚಿವ ಭೈರತಿ ಅವರಿಗೆ ಟಾಂಗ್ :ಚರ್ಚೆ ವೇಳೆ ಮಧ್ಯಪ್ರವೇಶಕ್ಕೆ ಮುಂದಾದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ತಿಮ್ಮಾಪೂರ್ ಟಾಂಗ್ ನೀಡಿದರು. ನೀವು ಇಲ್ಲಿ ತಿಳಿದುಕೊಳ್ಳದೇ ಅಲ್ಲಿ ಹೋಗಿದ್ದೀರಿ. ಅಲ್ಲಿ ತಿಳಿದುಕೊಳ್ಳಲು ಬಹಳ ಸಮಯ ಬೇಕು, ಅಷ್ಟರಲ್ಲಿ ಮತ್ತೆ ಇಲ್ಲಿಗೆ ಬರುತ್ತೀರಿ ಬಿಡಿ ಎಂದರು.
ಓದಿ: ವಿಧಾನಸಭೆಯಲ್ಲಿ ಭೂ ಸ್ವಾಧೀನ ಕುರಿತು ಪ್ರತಿಧ್ವನಿ : ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಮಾತಿನ ಚಕಮಕಿ