ಬೆಂಗಳೂರು :ರಾಜ್ಯದಲ್ಲಿ ಮಹಾ ಭ್ರಷ್ಟಾಚಾರ ಆಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. 130 ಕೋಟಿಗೂ ಅಧಿಕ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬರುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಸಿಎಂಗೆ ಸಿದ್ದರಾಮಯ್ಯ ಪತ್ರ : ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರ ಏಳಿಗೆಗಾಗಿ ರಚಿಸಲ್ಪಟ್ಟಿರುತ್ತದೆ. ಈ ನಿಗಮಗಳಲ್ಲಿ ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಈ ಯೋಜನೆಗಳಲ್ಲಿ ಒಂದಾದ ಬಡ ರೈತರ ಏಳಿಗೆಗಾಗಿ “ಗಂಗಾ ಕಲ್ಯಾಣ" ಎನ್ನುವ ಯೋಜನೆಯನ್ನು ಕೂಡ ತರಲಾಗಿದೆ. 2018-19 ನೆ ಸಾಲಿನಲ್ಲಿ ರೈತರ ಅನುಕೂಲಕ್ಕೆ ಸಣ್ಣ ಸಣ್ಣ ಕಂಪನಿಯ ಗುತ್ತಿಗೆದಾರರಿಗೆ ಎರಡೆರಡು ಪ್ಯಾಕೇಜ್‌ಗಳಂತೆ ಗುತ್ತಿಗೆ ನೀಡಲಾಗುತ್ತಿತ್ತು ಮತ್ತು ಮೋಟರ್ ಪಂಪ್ ಸರಬರಾಜು ಮಾಡಲು ಪ್ರತ್ಯೇಕ ಟೆಂಡರ್ ಕರೆದು ಪ್ರತಿ ಏಜೆನ್ಸಿಗೆ ಎರಡು ಪ್ಯಾಕೇಜ್ ಮಾಡಿದ್ದರಿಂದ ಕಾಲದ ಮಿತಿಯಲ್ಲಿ ಪ್ರಗತಿಯನ್ನು ಸಾಧಿಸಲು ಅನುಕೂಲವಾಗಿತ್ತು ಎಂದು ವಿವರಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ : 2019-20 ಹಾಗೂ 2020-21 ನೆ ಸಾಲಿನಲ್ಲಿ ಈ ಮೇಲ್ಕಂಡ 4 ನಿಗಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಜನಾಂಗದವರ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಕೊಳವೆ ಬಾವಿ ಕೊರೆಯಲು ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಕೆಲವೆ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ 30 ಪ್ಯಾಕೇಜ್ ಮಾಡಲಾಗಿದೆ. ಅದರಲ್ಲಿ ಎರಡು ಪ್ಯಾಕೇಜ್ ಮಿತಿಯನ್ನು ತೆಗೆದುಹಾಕಿ ದೊಡ್ಡ ವಹಿವಾಟುಗಳ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿರುತ್ತದೆ. ಹಾಗೂ ಕೊಳವೆ ಬಾವಿ ಕೊರೆಯುವುದು, ಪಂಪ್ ಮೋಟಾರ್ ಅಳವಡಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು ಒಟ್ಟಿಗೆ ಒಬ್ಬನೇ ಗುತ್ತಿಗೆದಾರ ನಿರ್ವಹಿಸುವ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ ಟೆಂಡರ್‌ನಲ್ಲಿ ನಕಲಿ ದಾಖಲಾತಿಯನ್ನು ಸಲ್ಲಿಸಿರುವ ಗುತ್ತಿಗೆದಾರರಿಗೆ ಅರ್ಹತೆ ನೀಡುವುದು, ದರಗಳನ್ನು ನಿಗಧಿಪಡಿಸುವುದರಲ್ಲಿ ಬಿಡ್ ಸಾಮರ್ಥ್ಯವನ್ನು ವಹಿವಾಟಿಗಿಂತ ನಾಲ್ಕು ಪಟ್ಟು ಹೆಚ್ಚು ನೀಡುವುದಕ್ಕೆ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ, ಸುಮಾರು 130 ಕೋಟಿಗೂ ಅಧಿಕ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬರುತ್ತಿದ್ದು, ಸರ್ಕಾರವು ತಕ್ಷಣವೆ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತೇನೆ. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಒದಗಿಸಲಾಗಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.