ಬೆಂಗಳೂರು :ನಾನು ಶಾದಿ ಭಾಗ್ಯ ತಂದಾಗ ಯಡಿಯೂರಪ್ಪ ವಿರೋಧ ಮಾಡಿದ್ದರು. ಆದರೂ ನಾವು ಒತ್ತಾಯಪೂರ್ವಕವಾಗಿ ಜಾರಿಗೆ ತಂದಿದ್ದೆವು. ಇದೀಗ ಅವರು ಬಾಂಡ್ ಕೊಡಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಓದಿ: ಜನವಿರೋಧಿ ಕಾಯ್ದೆಗಳ ಕಿರು ಹೊತ್ತಿಗೆ ಬಿಡುಗಡೆ.. ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ- ಸಿದ್ದರಾಮಯ್ಯ
ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯೋಜನೆ ವಾಪಸ್ ಆಗೋವರೆಗೂ ನಾವು ಹೋರಾಟ ಮಾಡುತ್ತೇವೆಂದು ಯಡಿಯೂರಪ್ಪನವರು ಬೆಳಗಾವಿಯಲ್ಲಿ ಹೇಳಿದ್ದರು. ಈಗ ಬ್ರಾಹ್ಮಣರಿಗೆ ಬಾಂಡ್ ಕೊಡುತ್ತಾ ಇದ್ದಾರೆ, ಕೊಡಲಿ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಲ್ಲ ಎಂದರು.
ನಾನು ಶಾದಿ ಭಾಗ್ಯ ಯೋಜನೆ ಜಾರಿ ಮಾಡಿದಾಗ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮಳೆಯಲ್ಲೇ ಕೂತು ಪ್ರತಿಭಟನೆ ಮಾಡಿದ್ದರು. ಒಂದು ಜಾತಿ ಬಣವನ್ನು ಬಿಜೆಪಿಯವರು ಎತ್ತಿಕಟ್ಟಿದ್ದರು. ನಾವು ಪ್ರಬಲವಾಗಿ ನಿಂತಾಗ ಸುಮ್ಮನಾಗಿದ್ದರು ಎಂದರು.
ಭಾಗ್ಯ ನಿಲ್ಲಿಸಲಾಗಿದೆ :ಶಾದಿಭಾಗ್ಯ ಸೇರಿದಂತೆ ಹಲವು ಭಾಗ್ಯಗಳನ್ನು ನಿಲ್ಲಿಸಲಾಗಿದೆ. ಪಶು, ಕೃಷಿ, ವಿದ್ಯಾಸಿರಿ, ಕುರಿ, ಜಾನುವಾರು ಸತ್ತರೆ ನೀಡುವ ಪರಿಹಾರ ನಿಲ್ಲಿಸಿದ್ದಾರೆ. ನೀರು ನಿಲ್ಲಿಸಿ ಅನೇಕ ಕಡೆ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದಾರೆ. ದುಡ್ಡಿಲ್ಲ ಎಂದು ಇವನ್ನೆಲ್ಲಾ ನಿಲ್ಲಿಸಿದ್ದೇವೆ ಎನ್ನುತ್ತಿದ್ದಾರೆ.
ದುಡ್ಡಿಲ್ಲ ಎಂದು ಹೇಳಬೇಡಿ, ಕೊರೊನಾಗೆ 5-6 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ನಮ್ಮ ಸುಧಾಕರ್ ವಿಧಾನಸಭೆಯಲ್ಲಿ ₹4200 ಕೋಟಿ ಕೊರೊನಾಗೆ ಖರ್ಚಾಗಿದೆ ಎಂದಿದ್ದಾನೆ. ಸಿಎಂ ಬಿ ಎಸ್ ಯಡಿಯೂರಪ್ಪ ನಿನ್ನೆ ನಮಗೆ ₹50 ಸಾವಿರ ಕೋಟಿ ರೂ. ಖೋತಾ ಆಗಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ತೆರಿಗೆ ವಸೂಲಿ ಚೆನ್ನಾಗಿ ಆಗುತ್ತಿದೆ ಎನ್ನುತ್ತಿದ್ದಾರೆ. ದುಡ್ಡಿಲ್ಲ ಎನ್ನುತ್ತಿರುವ ದರಿದ್ರ ಸರ್ಕಾರ ಇದು. ಬಿಜೆಪಿಯವರು ದಲಿತರ ದೇವರು ಎಂದ ಅವರು ನೀನು ಒಂದು ಹಾಕು ನಾನು ಒಂದು ಹಾಕುತ್ತೇನೆ ಎನ್ನುವ ಹಳ್ಳಿ ಗಾದೆಮಾತಿನಂತೆ ಇದೆ ಬಿಜೆಪಿ ಆಡಳಿತ ಎಂದು ಲೇವಡಿ ಮಾಡಿದರು.
ಕೇಂದ್ರದ ವಿರುದ್ಧ ಆಕ್ರೋಶ :ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಬೆಲೆ ಕೊಡುತ್ತಿಲ್ಲ. ಆದರೂ ರೈತರ ಬದ್ಧತೆ ಪ್ರಶ್ನಾತೀತ, ಹಗಲು-ರಾತ್ರಿ ಪ್ರತಿಭಟಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಎಷ್ಟು ಬೇಜವಾಬ್ದಾರಿಯಿಂದ ಕೂಡಿದೆ ಎನ್ನುವುದು ಗೊತ್ತಾಗುತ್ತದೆ. ಕೃಷಿ ಸಚಿವ ತೋಮರ್ 8 ಸುತ್ತು ಸಭೆ ನಡೆಸಿದ್ದು ಹೊರತುಪಡಿಸಿದ್ರೆ ಬೇರೆ ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಕೇವಲ ಸಭೆ ಕರೆಯುವುದಕ್ಕೆ ಮಾತ್ರ ಕೇಂದ್ರ ಸರ್ಕಾರ ಸೀಮಿತವಾಗಿದ್ದು, ಇವರಿಗೆ ರೈತರ ಪರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.