ಬೆಂಗಳೂರು :ರಾಜ್ಯದಲ್ಲಿ ಅನೈತಿಕ, ಭ್ರಷ್ಟಾಚಾರ ಸರ್ಕಾರ ಇದೆ. ಈ ಹಿಂದೆ ಕೂಡ ಭ್ರಷ್ಟಾಚಾರ ಇತ್ತು. ಆದರೆ, ಇಷ್ಟು ಭ್ರಷ್ಟಾಚಾರ ಸರ್ಕಾರ ನಾನು ಜೀವನದಲ್ಲಿ ನೋಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಮೂಲಕ ಯಡಿಯೂರಪ್ಪ ಆಯ್ಕೆಯಾಗಿಲ್ಲ. ನಮ್ಮಷ್ಟು ಮತಗಳು ಕೂಡ ಅವರಿಗೆ ಸಿಕ್ಕಿಲ್ಲ. ಬಹುಮತ ಸಾಬೀತು ಮಾಡದೆ ರಾಜೀನಾಮೆ ಕೊಟ್ಟರು. ನಮ್ಮ ಶಾಸಕರನ್ನು ಕೊಂಡುಕೊಂಡು ಸರ್ಕಾರ ಮಾಡಿದ್ದಾರೆ. ನುಡಿದಂತೆ ನಡೆದ ಸರ್ಕಾರ ಅಂದರೆ ಅದು ನನ್ನ ಸರ್ಕಾರ.
ಕೊಟ್ಟ ಎಲ್ಲ ಭರವಸೆಯನ್ನು ನಾವು ಈಡೇರಿಸಿದ್ದೇವೆ. ನಮ್ಮನ್ನು ತೆಗಳುತ್ತಾ ಇದ್ದರು. ಅವರ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಡ್ರೈವಿಂಗ್ ಬರದೆ ಗಾಡಿ ಕೆಟ್ಟು ನಿಂತಿದೆ. ಯಾವುದೇ ಯೋಜನೆಗೆ ದುಡ್ಡಿಲ್ಲ ಅಂತಾರೆ. ಹಾಗಾದ್ರೆ, ಸರ್ಕಾರ ಯಾಕೆ ನಡಿಸ್ತಾ ಇದ್ದೀರಾ? ಕುರ್ಚಿ ಬಿಟ್ಟು ಇಳಿಯಿರಿ. ನಾವು ಬಂದು ಅಧಿಕಾರ ಮಾಡುತ್ತೇವೆ. ಈ ಸರ್ಕಾರ ಕಿತ್ತೊಗೆಯುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಇದನ್ನೂ ಓದಿ:ನೋಟಿಸ್ಗೆ ನಾ ಹೆದರಲ್ಲ, ನೀವು ಕುರ್ಚಿ ಬಿಡಬೇಕಾದೀತು: ಯತ್ನಾಳ್ ಗುಡುಗು
ಪ್ರಧಾನಿ ಮೋದಿ ಗೋಮುಖ ವ್ಯಾಘ್ರ :ವೈಫಲ್ಯಗಳ ಬಗ್ಗೆ ಮುಖ ತೊರಿಸೋಕೆ ಆಗದೆ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದು ಮೋದಿಯನ್ನ ಅಣುಕಿಸಿದ ಸಿದ್ದರಾಮಯ್ಯ, ಖರ್ಗೆಯವರು 11 ಬಾರಿ ಚುನಾವಣೆ ಗೆದ್ದವರು. ಈಗ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿದ್ದಾರೆ. ಮೋದಿಯವರ ವಿರುದ್ಧ ಗುಡುಗ ಬೇಕಾದರೆ ಇವರಿಗೆ ಮಾತ್ರ ಸಾಧ್ಯ.
ಯಾಕೆಂದರೆ, ಕೇಂದ್ರದಲ್ಲಿ ಕೆಟ್ಟ ಸರ್ಕಾರವಿದೆ. ಮೋದಿಯಂತ ಸುಳ್ಳು ಹೇಳುವವರು ಯಾರೂ ಇರಲಿಲ್ಲ. ಪ್ರಧಾನಿ ಮೋದಿ ಗೋಮುಖ ವ್ಯಾಘ್ರ. ಜನರು, ಯುವಕರನ್ನ ದಾರಿ ತಪ್ಪಿಸಿದ್ದಾರೆ. ಯುವಕರು ಮೋದಿ.. ಮೋದಿ.. ಅಂತಾ ಹೇಳ್ತಿದ್ರು. ಅಂತಹ ಯುವಕರಿಗೆ ಮೋದಿ ದ್ರೋಹ ಬಗೆದಿದ್ದಾರೆ. ಅದನ್ನ ಬಯಲು ಮಾಡುವ ಶಕ್ತಿ ಖರ್ಗೆಯವರಿಗಿದೆ. ಮೋದಿ ಬಣ್ಣ ನಾವು ಬಯಲು ಮಾಡಬೇಕಿದೆ ಎಂದರು.
ಅಚ್ಛೇದಿನ್ ಬಂದೇ ಇಲ್ಲ. ಅಚ್ಛೇದಿನ್ ಆಯೇಗಾ ಮೋದಿಜೀ.. ನಾ ಖಾವೂಂಗಾ, ನಾ ಖಾನೇ ದೂಂಗಾ ಅಂದ್ರಲ್ಲಪ್ಪಾ ಮೋದಿ. ಹೀಗೆ ಹೇಳಿ ಜನರಿಗೆ ಟೋಪಿ ಹಾಕಿಬಿಟ್ರಲ್ಲಪ್ಪಾ. ಇವರು ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ ಕುಸಿದಿದೆ. ಈ ವರ್ಷ ಮೈನಸ್, ಮುಂದಿನ ವರ್ಷವೂ ಮೈನಸ್. ಪಾಪ ಸೀತಾರಾಮನ್ ಹೆಣ್ಣುಮಗಳಿದ್ದಾರೆ.
ಆ ಹೆಣ್ಣುಮಗಳ ಕೈಯಲ್ಲೂ ಸುಳ್ಳು ಹೇಳಿಸ್ತಿದ್ದಾರೆ. ಸಾಲ ಮಾಡಿ ದೇಶ ನಡೆಸುವ ಪರಿಸ್ಥಿತಿ ಎದುರಾಗಿದೆ. ಈ ವರ್ಷ 90 ಸಾವಿರ ಕೋಟಿ ಸಾಲ ಮಾಡ್ತಿದ್ದಾರೆ. ಇದೇನಾ ನಿಮ್ಮ ಅಚ್ಛೇದಿನ್. ಪೆಟ್ರೋಲ್, ಗ್ಯಾಸ್ ದಿನೇದಿನೆ ಹೆಚ್ಚುತ್ತಿದೆ. 380 ರೂ. ಇದ್ದ ಸಿಲಿಂಡರ್ ಬೆಲೆ 781 ರೂ. ಆಗಿದೆ. ಪೆಟ್ರೋಲ್ ಬೆಲೆ 91.80 ಪೈಸೆ, ಡೀಸೆಲ್ ಬೆಲೆ ಲೀಟರ್‌ಗೆ 80 ರೂ. ಆಗಿದೆ.
ಇದೇನಾ ಮೋದಿಯವರೇ ನಿಮ್ಮದು ಅಚ್ಛೇದಿನ್? ರೈತರ ಆದಾಯ ಕುಸಿಯುತ್ತಲೇ ಇದೆ. ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ಕಳೆದ ಮೂರು ತಿಂಗಳಿಂದ ಹೋರಾಟ ನಡೆದಿದೆ. ಇದಕ್ಕೆ ಬೆಲೆ ಸಿಕ್ಕಿಲ್ಲ ಎಂದರು.