ಬೆಂಗಳೂರು:ಮೀಸಲಾತಿ ಪರಿಷ್ಕರಣೆ ಅಸಾಂವಿಧಾನಿಕವಾಗಿದ್ದು, ರಾಜ್ಯದ ಜನತೆಗೆ ಸರ್ಕಾರ ಎಸಗಿದ ದ್ರೋಹ. ಕೂಡಲೇ ಬಿಜೆಪಿ ಸರ್ಕಾರ ವಜಾಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆಗೂಡಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿ ಮಾಡಿದೆ. ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಸಮಾಜ ವಿಭಜನೆ ಮಾಡುವ, ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನ ಮಾಡಿದೆ. ಮೀಸಲಾತಿಯ ಹೊಸ ವರ್ಗೀಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರರು ನೀಡಿರುವ ಸಂವಿಧಾನದ ಉದ್ದೇಶ ಯಾವುದೇ ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡದೆ ಸಮಾನ ರಕ್ಷಣೆ ನೀಡಬೇಕು ಎಂಬುದು. ಇದನ್ನೇ ಸಂವಿಧಾನದ 14ನೇ ಪರಿಚ್ಛೇದ ಹೇಳುವುದು. 15 ಮತ್ತು 16ನೇ ಪರಿಚ್ಛೇದವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ. ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಆ ಜನರಿಗೆ ವಿಶೇಷ ಸವಲತ್ತು ನೀಡಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕು ಎಂಬುದು ಇದರ ಉದ್ದೇಶ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಇರುವವರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಸಮಸಮಾಜ ಸ್ಥಾಪನೆಯ ಕಡೆಗೆ ಹೋಗಲು ಸಾಧ್ಯವಾಗುತ್ತದೆ. ಇದನ್ನು ಸಂವಿಧಾನ ಸ್ಟಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಾತಿ ನೀಡುತ್ತಾ ಬಂದಿವೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ.
ಜಾತಿ ವ್ಯವಸ್ಥೆ ಇರುವುದರಿಂದಲೇ ಅಸಮಾನತೆ ನಿರ್ಮಾಣವಾಗಿರುವುದು. 1949ರ ನವೆಂಬರ್ 25ರಂದು ಅಂಬೇಡ್ಕರ್ ಮಾಡಿದ ಭಾಷಣದಲ್ಲಿ, 1950ರ ಜನವರಿ 26ರಿಂದ ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಇಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಇದನ್ನು ಮಾಡದೆ ಹೋದರೆ ನಮಗೆ ಸ್ವಾತಂತ್ರ್ಯ ಬಂದಿದ್ದಕ್ಕೆ ಅರ್ಥವಿರುವುದಿಲ್ಲ. ನಾವು ಈ ಅಸಮಾನತೆಯನ್ನು ಹೋಗಲಾಡಿಸದೆ ಹಾಗೆಯೇ ಮುಂದುವರೆಸಿಕೊಂಡು ಹೋದರೆ ಯಾರು ಅಸಮಾನತೆ, ಅನ್ಯಾಯಕ್ಕೆ ಒಳಗಾಗಿದ್ದಾರೆ ಆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂಬ ಎಚ್ಚರಿಕೆ ನೀಡಿದ್ದರು ಎಂದರು.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸಂವಿಧಾನ ಹೇಳಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂಬುದು ಆರಂಭದಲ್ಲಿ ಸಂವಿಧಾನದಲ್ಲಿ ಇಲ್ಲದಿದ್ದರು 1951ರಲ್ಲಿ ಮೊದಲನೇ ತಿದ್ದುಪಡಿ ತಂದು ಸೇರಿಸಲಾಗಿದೆ. ರಾಜ್ಯದಲ್ಲಿ ನಾಗನಗೌಡ ಆಯೋಗ, ಎಲ್.ಜಿ ಹಾವನೂರು, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಅವರ ಸಮಿತಿ ಹೀಗೆ 4 ಸಮಿತಿಗಳು ರಚನೆಯಾಗಿ ವರದಿ ನೀಡಿವೆ.
ದ್ವೇಷದ ರಾಜಕಾರಣ:ಕೇಂದ್ರದಲ್ಲಿ ಮಂಡಲ್ ಕಮಿಷನ್ ರಚನೆಯಾಗಿ ವರದಿ ನೀಡಿದೆ. ಇದರ ಆಧಾರದ ಮೇಲೆ ಮೀಸಲಾತಿ ನಿಗದಿಯಾಗಿದೆ. ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ. ಯಾವ ಸಮಿತಿಯ ವರದಿಗಳು ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಂಮರ ಮೀಸಲಾತಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಇದರಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಮುಸ್ಲಿಂಮರಿಗೆ 4% ಮೀಸಲಾತಿ ಹಿಂದಿನಿಂದ ಇದೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿಲ್ಲ ಎಂಬುದು ನಿಜ. ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು. ವೀರಶೈವ ಲಿಂಗಾಯತರು 15% ಮೀಸಲಾತಿ ಮತ್ತು ತಮ್ಮನ್ನು 2ಎಗೆ ಸೇರಿಸುವಂತೆ ಕೇಳಿದ್ದರು. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಮೀಸಲಾತಿ 50% ಮೀರಬಾರದು ಎಂದು ಹೇಳಿತ್ತು. ರಾಜ್ಯದಲ್ಲಿ ಈಗ ಮೀಸಲಾತಿ 50% ಇದೆ. ನ್ಯಾಯಾಲಯದ ಈ ತೀರ್ಪನ್ನು ಬದಲಾವಣೆ ಮಾಡಬೇಕಾಗಿರುವುದು ಸಂಸತ್ತು. ಬದಲಾವಣೆ ಮಾಡಿರುವುದು ಊರ್ಜಿತವಾಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಬೇಕು. ಇವರು ಇದ್ಯಾವುದನ್ನಾದರೂ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ರಾಜಕೀಯ ಗಿಮಿಕ್ ಅಲ್ಲವೇ?: ಇಂದಿರಾ ಸಹಾನಿ ಪ್ರಕರಣದ ತೀರ್ಪಿನ ಪ್ರಕಾರ ಪ್ರತಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಯಾಗಬೇಕು ಮತ್ತು 10 ವರ್ಷಕ್ಕೊಮ್ಮೆ ಅದರ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ. ಯಾವುದನ್ನೇ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಬೇಕಾದರೆ ಅಥವಾ ಸೇರಿಸಬೇಕಾದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸು ಬೇಕು. ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ತೆಗೆದುಹಾಕಿ ಎಂದು ರಿಪೋರ್ಟ್ ಎಲ್ಲಿದೆ? ಇದು ಅಲ್ಪಸಂಖ್ಯಾತರಿಗೆ ಮಾಡುತ್ತಿರುವ ಅನ್ಯಾಯ ಅಲ್ಲವಾ? 1995ರಿಂದ ಈ ವರೆಗೆ ನೀಡುತ್ತಿದ್ದ ಮೀಸಲಾತಿಯನ್ನು ಈಗ ತೆಗೆದುಹಾಕಲು ಕಾರಣವೇನು? ಅವರನ್ನು ಇಡಬ್ಲ್ಯೂಎಸ್ಗೆ ಸೇರಿಸಿ ಎಂದು ಯಾರಾದರೂ ಕೇಳಿದ್ದರಾ ಅಥವಾ ಯಾವುದಾದರೂ ವರದಿ ಇದೆಯಾ? ಎಸ್ಸಿ ಮತ್ತು ಎಸ್ಟಿಗೆ ಮೀಸಲಾತಿ ಏರಿಕೆ ಮಾಡಲಾಗಿದೆ. ಇದು ನಮ್ಮ ಬೇಡಿಕೆಯೂ ಆಗಿತ್ತು.
2019ರಲ್ಲಿ ರಚನೆಯಾಗಿದ್ದ ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ 2020ರಲ್ಲಿ ವರದಿ ನೀಡಿತ್ತು. ವರದಿ ಬಂದು 3 ವರ್ಷ ಕಳೆದರೂ ಸರ್ಕಾರ ನಿದ್ದೆ ಮಾಡುತ್ತಿತ್ತು. ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಮಾಡಿದರು. ಸದನದಲ್ಲಿ ನಮ್ಮ ಎಸ್ಸಿ ಹಾಗೂ ಎಸ್ಟಿ ಮತ್ತು ಹಿಂದುಳಿದ ಜಾತಿಗಳ ಶಾಸಕರು ಪ್ರತಿಭಟನೆ ಮಾಡಿದರು. ಪ್ರತಿ ಬಾರಿ ಸರ್ಕಾರ ನೆಪಗಳನ್ನು ಹೇಳಿ ಮುಂದಕ್ಕೆ ಹಾಕಿತ್ತು. ಆಗ ಯಾವುದೇ ತೀರ್ಮಾನ ಕೈಗೊಳ್ಳದೆ ಕೊನೆಗೆ ವಿಧಿಯಿಲ್ಲದೆ ಸರ್ವಪಕ್ಷ ಸಭೆಯನ್ನು ಕರೆದರು. ಈ ಸಭೆಯಲ್ಲಿ ನಾವು ಸರ್ಕಾರಕ್ಕೆ 'ಮೀಸಲಾತಿ ಪ್ರಮಾಣ 56%' ಆಗುತ್ತಿದೆ. ಇದು ಸಂವಿಧಾನ ಮತ್ತು ಇಂದಿರಾ ಸಹಾನಿ ಪ್ರಕರಣದ ತೀರ್ಪಿಗೆ ವಿರುದ್ಧವಾಗುತ್ತದೆ. ಹೀಗಾಗಿ ಈ ಬಗ್ಗೆ ಸಂವಿಧಾನ ತಿದ್ದುಪಡಿ ಮಾಡಬೇಕು ಮತ್ತು ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಬೇಕು' ಎಂದು ನಾವು ಸ್ಪಷ್ಟವಾಗಿ ಹೇಳಿದ್ದೆವು.
ಇದಾದ ನಂತರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು. ಆ ನಂತರ ರಾಜ್ಯಪಾಲರು ಅದಕ್ಕೆ ಸಹಿ ಮಾಡಿದರು. 2022ರಲ್ಲಿ ಸರ್ಕಾರ ಕಾಯ್ದೆ ತಂದಿತು. ಆ ನಂತರ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒಂದು ಪತ್ರ ಬರೆದಿದೆಯಾ? ಎರಡು ಲೋಕಸಭಾ ಅಧಿವೇಶನಗಳು ನಡೆದವು. ಅಲ್ಲಿ ಚರ್ಚೆಗೆ ಬಂತಾ? ಕೇಂದ್ರ ಸರ್ಕಾರಕ್ಕೆ ಇದನ್ನು 9ನೇ ಶೆಡ್ಯೂಲ್ಗೆ ಸೇರಿಸುವಂತೆ ಒತ್ತಾಯ ಮಾಡಿದೆಯಾ? ನಾವು ಪ್ರತಿಭಟನೆ ಮಾಡುತ್ತೇವೆ ಎಂಬುದು ಗೊತ್ತಾದ ಮೇಲೆ ಮೊನ್ನೆ 23ನೇ ತಾರೀಖಿನ ಸಂಜೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಚುನಾವಣೆ ಇನ್ನೇನು ಎರಡ್ಮೂರು ದಿನದೊಳಗೆ ಘೋಷಣೆ ಆಗುತ್ತದೆ ಎಂಬುದು ಗೊತ್ತಿದ್ದರೂ 24ರ ಸಂಜೆ ಈ ಮೀಸಲಾತಿ ಪರಿಷ್ಕರಣೆ ನೀತಿ ತಂದಿರುವುದರ ಹಿಂದಿನ ಉದ್ದೇಶ ಏನು? ಇದು ರಾಜಕೀಯ ಗಿಮಿಕ್ ಅಲ್ಲವೇ? ಯಾರಿಗೂ ನ್ಯಾಯ ಕೊಡಬೇಕು ಎಂಬುದು ಸರ್ಕಾರಕ್ಕೆ ಇಲ್ಲ ಎಂದು ವಿವರಿಸಿದರು.
ಸರ್ಕಾರವನ್ನು ವಜಾಗೊಳಿಸಿ:ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಇದೆ. ನಾವು ಯಾವುದೇ ಜಾತಿ, ಧರ್ಮ, ಲಿಂಗದ ಜನರಿಗೆ ತಾರತಮ್ಯ ಮಾಡದೆ ರಕ್ಷಣೆ ಸಿಗಬೇಕು ಎಂದು ಪ್ರತಿಪಾದಿಸುವವರು. ಎಲ್ಲಾ ಕಾಲದಲ್ಲೂ ಮೀಸಲಾತಿ ನೀಡಿದವರು ಕಾಂಗ್ರೆಸ್ನವರು. ಅವಕಾಶವಂಚಿತರಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಿದವರು ನಾವು. ಬಿಜೆಪಿ ಮಾಡಿರುವ ಏಕೈಕ ತಿದ್ದುಪಡಿ ಎಂದರೆ ಆರ್ಥಿಕವಾಗಿ ದುರ್ಬಲರಾದ ಸಾಮಾನ್ಯ ವರ್ಗದ ಜನರಿಗೆ ಮೀಸಲಾತಿ ನೀಡಲು ತಿದ್ದುಪಡಿ ತಂದದ್ದು. ಬಿಜೆಪಿ ಒಮ್ಮೆಯಾದರೂ ಸಾಮಾಜಿಕ ನ್ಯಾಯದ ಪರ ಮಾತನಾಡಿರುವ ಒಂದೇ ಒಂದು ವಾಕ್ಯ ಇದ್ದರೆ ತೋರಿಸಲಿ ನೋಡೋಣ. ಕಾಂಗ್ರೆಸ್ ಪಕ್ಷ ಮಾತ್ರ ಹಿಂದಿನಿಂದಲೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಗೌರವಿಸಿಕೊಂಡು ಬಂದು, ಅದರ ಆಶಯದಂತೆ ನಡೆಯುತ್ತಿದೆ. ಸಮಿತಿಯ ಶಿಫಾರಸಿಗೆ ವಿರುದ್ಧವಾಗಿ ಮೀಸಲಾತಿ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸುತ್ತೇನೆ. ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಈ ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಮುಂದುವರೆಯುವ ಹಕ್ಕು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರದಿಂದ ಜನರಿಗೆ ವಂಚನೆ: ಡಿ.ಕೆ.ಶಿವಕುಮಾರ್