ಬೆಂಗಳೂರು:ಆಮ್ಲಜನಕ ಕೊರತೆಯಿಂದ ಇನ್ನು ಮುಂದೆ ಯಾವುದೇ ಸಾವು ರಾಜ್ಯದಲ್ಲಿ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕರೆದು ಭೇಟಿ ಮಾಡಿದ್ದೆ. ರಾಜ್ಯದಲ್ಲಿ ಇವತ್ತು ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ 28 ಜನ ಚಾಮರಾಜನಗರದಲ್ಲಿ ಸತ್ತಿದ್ದಾರೆ. 3 ಜನ ಸತ್ತಿದ್ದಾರೆ ಎಂಬ ಸುಧಾಕರ್ ಹೇಳಿಕೆ ಶುದ್ಧ ಸುಳ್ಳು. ನಿನ್ನೆ ನಾನು ಅಲ್ಲಿ ಭೇಟಿ ನೀಡಿದಾಗ ಆಸ್ಪತ್ರೆ ಡೀನ್, ಜಿಲ್ಲಾಧಿಕಾರಿ ಎಲ್ಲಾ ಆಕ್ಸಿಜನ್ ಕೊರತೆ ಬಗ್ಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ 3 ಮಂದಿಯಲ್ಲ, 28 ಮಂದಿ ಮೃತರಾಗಿದ್ದಾರೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ಅಲ್ಲಿ 350 ಆಕ್ಸಿಜನ್ ಸಿಲಿಂಡರ್ ಬೇಕಿತ್ತು. ಆದರೆ ಕೇವಲ 150 ಸಿಲಿಂಡರ್ ಸಪ್ಲೈ ಆಗಿತ್ತು. ಭಾನುವಾರ ಮಧ್ಯಾಹ್ನ ಕೊರತೆ ಆಯ್ತು. ಈಗ ಇದನ್ನ ಮುಖ್ಯ ಕಾರ್ಯದರ್ಶಿಗೆ ಕೂಡಲೇ ಚಾಮರಾಜನಗರ ಜಿಲ್ಲೆಗೆ ಅಗತ್ಯ ಇರುವ ಆಕ್ಸಿಜನ್ ಒದಗಿಸಲು ಸೂಚಿಸಿದ್ದೇನೆ. ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಅಂತಾ ಹೇಳಿದ್ದೇನೆ. ನ್ಯಾಯಾಂಗ ತನಿಖೆ ಮಾಡಲು ನಾನು ಒತ್ತಾಯಿಸಿದ್ದೆ. ನ್ಯಾಯಾಂಗ ತನಿಖೆಗೆ ಸರ್ಕಾರ ಒಪ್ಪಿದೆ. ಸತ್ಯ ಹೊರ ಬರಬೇಕು ಅಷ್ಟೇ ಎಂದರು.
ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರುತ್ತೆ ಅಂತಾ ಆಶಾಭಾವನೆ ಇದೆ. ಸತ್ಯ ಹೊರ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮೈಸೂರು ಹಾಗೂ ಚಾಮರಾಜನಗರ ಡಿಸಿ ಹೇಳಿಕೆ ವಿಭಿನ್ನವಾಗಿದೆ. ಆ ಕುರಿತ ಸತ್ಯ ಕೂಡ ಹೊರ ಬರಬೇಕು ಎಂದರು.
ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಬಗ್ಗೆ ಹೇಳಿದ್ದಾರೆ. ಇಟ್ಸ್ ಗುಡ್. ಒಳ್ಳೇದೇ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷರಾಗಿ ಅಷ್ಟಕ್ಕೆ ಸೀಮಿತವಾಗಬಾರದು. ಸೂರ್ಯ ಮುಂದಾಳತ್ವ ವಹಿಸಿ ರಾಜ್ಯದ ಸಂಸದರ ನಿಯೋಗ ಪ್ರಧಾನಿ ಬಳಿ ಕೊಂಡೊಯ್ದು, ಆಕ್ಸಿಜನ್ ಬೇಡಿಕೆ ಇಡಬೇಕು. ತಜ್ಞರು ಕೊರೊನಾ ಈ ತಿಂಗಳು ಇನ್ನಷ್ಟು ಹೆಚ್ಚಾಗುತ್ತೆ ಎಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಸರಬರಾಜು ಮಾಡಬೇಕು. ಪಕ್ಕದ ಕೇರಳ ಆಕ್ಸಿಜನ್ ಸ್ಟಾಕ್ ಇಟ್ಟುಕೊಂಡಿದೆ. ಸರ್ಕಾರ ಸರಿಯಾಗಿ ಆಕ್ಸಿಜನ್ ಸಪ್ಲೈ ಮಾಡುತ್ತಿಲ್ಲ ಎಂದು ಹೇಳಿದರು.
ಸರ್ಕಾರ ಸುಳ್ಳು ಹೇಳ್ತಾ ಇದೆ. ಆಕ್ಸಿಜನ್ ಸಪ್ಲೈ ಮಾಡಬೇಕಿದ್ದ ಮಂತ್ರಿಯೇ 3 ಮಂದಿ ಮೃತರಾಗಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಮುಂದೆ ಇಂತಹ ಕೊರತೆ ಆಗಬಾರದು. ಹೈಕೋರ್ಟ್ ಸಹ ಆಮ್ಲಜನಕ ಕೊರತೆ ಆಗದಂತೆ ನೋಡಿಕೊಳ್ಳಿ ಎಂದಿದೆ. ಸರ್ಕಾರದಿಂದ ಯಾವುದೇ ಲೋಪ ಆಗದಂತೆ, ತಜ್ಞರು ಏನು ಹೇಳುತ್ತಾರೋ, ಅದನ್ನು ಪಾಲಿಸಿ ಎಂದರು.
ಇದನ್ನೂ ಓದಿ : ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ
ಆಮ್ಲಜನಕ ಕೊರತೆಯಿಂದ ಆಗುವ ಸಾವು ಸಹಜ ಸಾವಲ್ಲ. ಆಮ್ಲಜನಕ ಸರ್ಕಾರ ಪೂರೈಸಬೇಕು. ಇದು ಸರ್ಕಾರದ ಹೊಣೆಗಾರಿಕೆ. ಕೊರತೆಯಿಂದ ಸತ್ತರೆ ಅದು ಸರ್ಕಾರದಿಂದಾದ ಕೊಲೆ ಆಗಲಿದೆ. ಹೀಗಾಗಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಸರ್ಕಾರ ನಿಜವಾಗಿ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಮಾಹಿತಿಯೇ ಇರಲಿಲ್ಲ. ಆರೋಗ್ಯ ಸಚಿವರು ಹೇಳಿಕೆ ಮಾತ್ರ ನೀಡಿದ್ದಾರೆ. ಕ್ರಮ ಕೈಗೊಂಡಿಲ್ಲ. ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಾಕಷ್ಟು ಪತ್ರ ಬರೆದಿದ್ದೇನೆ, ಪ್ರಶ್ನೆ ಕೇಳಿದ್ದೇನೆ. ಯಾವುದಕ್ಕೂ ಉತ್ತರ ನೀಡಿಲ್ಲ. ಇನ್ನು ಕ್ರಮ ಹೇಗೆ? ಸಚಿವರಿಗೆ ಜವಾಬ್ದಾರಿ ನೀಡಿರುವುದು ಜನರ ಕಣ್ಣೊರೆಸುವ ತಂತ್ರ ಎಂದರು. ಮುಖ್ಯ ಕಾರ್ಯದರ್ಶಿಗಳು ಆಮ್ಲಜನಕ ಕೊರತೆ ಇರುವುದನ್ನು ಒಪ್ಪಿದ್ದಾರೆ. ಕೇಂದ್ರ ಸರ್ಕಾರ ಪೂರೈಸಿದರೆ ಸಮಸ್ಯೆ ಆಗಲ್ಲ. ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಪೂರೈಕೆ ಆಗದಿದ್ದರೆ ರಾಜ್ಯದಲ್ಲಿ ಸಮಸ್ಯೆ ಆಗಲಿದೆ ಎಂಬ ವಿಚಾರ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ವಿಷಯಾಂತರ ಮಾಡಲು ಯತ್ನ: ಕೋವಿಡ್ ರೋಗಿಗಳು ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟಿರುವ ವಿಚಾರವನ್ನು ತಿರುಗಿಸುವ ಉದ್ದೇಶಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಶಾಸಕರು ಕೊರತೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ನನಗೆ ಅನಿಸುತ್ತಿದೆ. ನಿಜವಾಗಿಯೂ ಜನರ ಹಾಗೂ ರೋಗಿಗಳ ಬಗ್ಗೆ ಕಾಳಜಿ ಇದ್ದರೆ ಈ ವಿಚಾರವನ್ನು ಮುಂಚೆಯೇ ಪ್ರಸ್ತಾಪ ಮಾಡಬೇಕಿತ್ತು. ಅಲ್ಲದೆ ಸಾಕಷ್ಟು ದೊಡ್ಡ ದೊಡ್ಡ ವ್ಯಕ್ತಿಗಳು ಇಂತಹ ಕಾರ್ಯದಲ್ಲಿ ನಿರತರಾಗಿದ್ದು, ಅವರ ಹೆಸರುಗಳನ್ನು ಪ್ರಸ್ತಾಪಿಸಬೇಕಿತ್ತು. ತೋರಿಕೆಗೆ ಈ ಪ್ರಯತ್ನ. ವಿಷಯಾಂತರ ಮಾಡುವ ಉದ್ದೇಶ ಇದರ ಹಿಂದೆ ಇರುವಂತೆ ನನಗೆ ಅನ್ನಿಸುತ್ತಿದೆ ಎಂದರು.