ಕರ್ನಾಟಕ

karnataka

ETV Bharat / state

ರೈತರು, ಕಾರ್ಮಿಕರ ಪ್ರತಿಭಟನೆ : ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ - ಬೆಂಗಳೂರು

ಆಡಳಿತದ ಸಮಸ್ಯೆಗಳನ್ನು ನಿಭಾಯಿಸಲು, ಸಂವಿಧಾನದಡಿ ಕಾರ್ಮಿಕ ಕಾಯ್ದೆಗಳನ್ನು ರೂಪಿಸಲಾಗಿದೆ. ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಮುತ್ಸದ್ಧಿತನ ಮತ್ತು ಪ್ರಬುದ್ಧತೆ, ಮಾನವೀಯತೆ, ಅಂತಃಕರಣಗಳ ಅಗತ್ಯವಿದೆ. ಸರ್ಕಾರ ನಿಷ್ಕ್ರಿಯವಾಗದೆ, ನಿರ್ಲಕ್ಷ್ಯ ಮನೋಭಾವ ತೊರೆದು ಕಂಪನಿಗಳ ಆಡಳಿತ ಮಂಡಳಿಗಳು ಮತ್ತು ಕಾರ್ಮಿಕರನ್ನು ಮಾತುಕತೆಗೆ ಕರೆದು ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿ ವ್ಯವಸ್ಥೆ ಸುಗಮಗೊಳಿಸಬೇಕು..

opposition leader Siddaramaiah  letter to CM
ಸಿಎಂಗೆ ಸಿದ್ದರಾಮಯ್ಯ ಪತ್ರ

By

Published : Dec 20, 2020, 3:06 PM IST

ಬೆಂಗಳೂರು :ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಚಳವಳಿ ಹಾಗೂ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ‌ ನಿರತರಾಗಿರುವ ರೈತರು, ಕಾರ್ಮಿಕರನ್ನು‌ ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕಾರು ತಯಾರಿಸುವ ಬಿಡದಿಯ ಟೊಯೋಟಾ ಕಂಪನಿ, ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನ ಖಾಯಂ ನೌಕರರು ಕೆಲಸ ಮಾಡುತ್ತಿದ್ದಾರೆ.

ಈ ಕಾರು ಉತ್ಪಾದನಾ ಘಟಕವನ್ನು ಲಾಕೌಟ್ ಮಾಡಲಾಗಿದೆ. ಇಲ್ಲಿನ ಕಾರ್ಮಿಕರು ಈಗ ಛತ್ರಿಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟರೂ ಈವರೆಗೂ ಕಂಪನಿಯು ಲಾಕೌಟ್ ತೆರವುಗೊಳಿಸಿ ಮಾತುಕತೆಗೆ ಮುಂದಾಗಿಲ್ಲ.

ವಿಸ್ಟ್ರಾನ್ ಕಂಪನಿ ಕಾರ್ಮಿಕರ ಪ್ರತಿಭಟನೆ ನಡೆಯುತ್ತಿದೆ. ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಕಂಪನಿಯಲ್ಲಿ ಸುಮಾರು 9,833 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 8,490 ಸಾವಿರ ಜನ ಗುತ್ತಿಗೆ ಕಾರ್ಮಿಕರಿದ್ದು, ಸುಮಾರು 1,343 ಖಾಯಂ ಕಾರ್ಮಿಕರಿದ್ದಾರೆ. ಈ ಕಂಪನಿಯು ಅಮೆರಿಕದ ಪ್ರತಿಷ್ಠಿತ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಕಂಪನಿಯಾದ ಆ್ಯಪಲ್ (ಐ-ಫೋನ್) ಕಂಪನಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ.

ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ 22,000 ರೂ. ವೇತನ ನೀಡುತ್ತೇವೆಂದು ಹೇಳಿ ಕೆಲಸಕ್ಕೆ ಸೇರಿಸಿಕೊಂಡು ಬಹುಪಾಲು ಜನರಿಗೆ ಕೇವಲ 8,000 ರೂ.ಗಳನ್ನು ಮಾತ್ರ ನೀಡಲಾಗುತ್ತಿದೆ ಎಂಬ ಆರೋಪವಿದೆ.‌ ಈ ಬಗ್ಗೆ ಗಮನ ಹರಿಸಬೇಕು ಅಂತಾ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿರುವ ಅರವಿಂದ್ ಫ್ಯಾಷನ್ಸ್ ಎಂಬ ಸಿದ್ದ ಉಡುಪು ಕಾರ್ಖಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿದಿದೆ ಎನ್ನುವ ನೆಪ ಹೇಳಿ ಏಕಾಏಕಿ ಬಂದ್ ಮಾಡಿದೆ.

12 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಬೆಳಗಾಗುವುದರೊಳಗೆ ಬೀದಿಗೆ ಬಿದ್ದಿದ್ದಾರೆ. ವಿಸ್ಟ್ರಾನ್ ಕಂಪನಿ ಕಾರ್ಮಿಕರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಬಳಿಕ, “ಪ್ರಧಾನಿ ಮೋದಿ ಅವರು ತನಗೆ ಕರೆ ಮಾಡಿ ಕಂಪನಿ ಬಗ್ಗೆ ಕಳವಳ ವ್ಯಕ್ತಪಡಿಸಿದರು” ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ.

ಪ್ರಧಾನ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಕಾರ್ಮಿಕರಿಗೆ ಸಂಬಳ ಕೊಡದೆ, ಅವರ ಹಕ್ಕುಗಳನ್ನು ಗೌರವಿಸದೆ ಶ್ರಮ ದೋಚಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾನೂನುಗಳೇ ಈ ಅಶಾಂತಿಗೆ ಮೂಲ ಕಾರಣ ಎಂದು ಮೊದಲು ಅರಿತು ಕೊಳ್ಳಬೇಕು.

ಓದಿ: ಭೂಸ್ವಾಧೀನಕ್ಕೆ ರಟ್ಟಿಹಳ್ಳಿಯಲ್ಲಿ ರೈತರ ವಿರೋಧ : ಪ್ರತಿಭಟನೆಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ

ರಾಜ್ಯದ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಕಂಪನಿಯಲ್ಲಿ ಮಹಿಳಾ ಕಾರ್ಮಿಕರನ್ನು ಅಸುರಕ್ಷಿತ ವಾತಾವರಣದಲ್ಲಿ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದುದನ್ನು, ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದ ವಿಚಾರವನ್ನು ಅಲ್ಲಗಳೆದಿಲ್ಲ. ಕಂಪನಿಯು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳದೆ ಕಾರ್ಮಿಕರು ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಅವರು, “ಬೇಕಿದ್ದರೆ ಕಾರ್ಮಿಕರು ಕಾರ್ಮಿಕ ನ್ಯಾಯಾಲಯಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದಿದ್ದಾರೆ. ಇದು ಸರ್ಕಾರದ ಆಡಳಿತ ನಡೆಸುವ ಕ್ರಮವೇ?. ಆಡಳಿತದ ಸಮಸ್ಯೆಗಳನ್ನು ನಿಭಾಯಿಸುವುದಕ್ಕಾಗಿ, ಸಂವಿಧಾನದಡಿ ಕಾರ್ಮಿಕ ಕಾಯ್ದೆಗಳನ್ನು ರೂಪಿಸಲಾಗಿದೆ. ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಮುತ್ಸದ್ಧಿತನ ಮತ್ತು ಪ್ರಬುದ್ಧತೆ, ಮಾನವೀಯತೆ, ಅಂತಃಕರಣಗಳ ಅಗತ್ಯವಿದೆ.

ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಗದೆ, ನಿರ್ಲಕ್ಷ್ಯ ಮನೋಭಾವವನ್ನು ತೊರೆದು ಕಂಪನಿಗಳ ಆಡಳಿತ ಮಂಡಳಿಗಳನ್ನು ಮತ್ತು ಕಾರ್ಮಿಕರನ್ನು ಮಾತುಕತೆಗೆ ಕರೆದು ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು. ಹಾಗೂ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ABOUT THE AUTHOR

...view details