ಬೆಂಗಳೂರು :ರಾಜ್ಯಪಾಲರ ಭಾಷಣದ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಸರ್ಕಾರ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ರಾಜ್ಯಪಾಲರ ಭಾಷಣದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಂಡಿಸಿದ್ದಾರೆ. ರಾಜ್ಯಪಾಲರ ಭಾಷಣ ಅಂದ್ರೆ ಸರ್ಕಾರ ಬರೆದುಕೊಡುವ ಪದ್ಧತಿ.
ಅವರ ಭಾಷಣ ಮೂಲಕ ರಾಜ್ಯಪಾಲರ ಮತ್ತು ಜನರ ದಿಕ್ಕು ತಪ್ಪಿಸಿದ್ದಾರೆ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಅವರ ಭಾಷಣದಲ್ಲಿ 116 ಪ್ಯಾರಾ ಇದೆ. ಬರೀ ಸುಳ್ಳು, ಭರವಸೆ, ಹಳೆ ಪ್ರೋಗ್ರಾಂ, ಇನ್ನು ನಮ್ಮ ಯೋಜನೆ ಕೆಲವು ಇದೆ ಎಂದರು.
ಹಿಂದಿನ ವರ್ಷಗಳ ಸಾಧನೆ, ಮುಂದಿನ ವರ್ಷದ ಮುನ್ನೋಟ ಇರಬೇಕು. ಅವ್ಯಾವುದೂ ಕೂಡ ರಾಜ್ಯಪಾಲರ ಭಾಷಣದಲ್ಲಿ ಇಲ್ಲ. ಕೊರೊನಾ ವಿಚಾರದಲ್ಲಿ ಸುಳ್ಳು ಹೇಳಿಸಿದ್ದಾರೆ. ಮೊದಲ ಅಲೆಯಲ್ಲಿ ಸರಿಯಾಗಿ ನಿಭಾಯಿಸದೆ ಸಾವಿರಾರು ಜನ ಸಾವನ್ನಪ್ಪಿದ್ದರು.
ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿದ್ಧತೆ ಮಾಡಿಕೊಳ್ಳದೆ ಸತ್ತಿದ್ದಾರೆ. ನನ್ನ ಪ್ರಕಾರ ನಾಲ್ಕು ಲಕ್ಷ ಜನ ಸತ್ತಿದ್ದಾರೆ. ಬಿಪಿಎಲ್ ಒಂದು ಲಕ್ಷ, ಎಪಿಎಲ್ 50 ಸಾವಿರ, ನಾವು ಒಬ್ಬರಿಗೆ ನಾಲ್ಕು ಲಕ್ಷ ಕೊಡಲು ಮನವಿ ಮಾಡಿದ್ದೆವು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ.
ನಮ್ಮ ಕೆಲವು ಯೋಜನೆಗೆ ಹೆಸರು ಬದಲಿಸಿದ್ದಾರೆ. ಬಾಪೂಜಿ ಸೇವಾ ಕೇಂದ್ರವನ್ನು ಗ್ರಾಮಾ ಒನ್ ಕೇಂದ್ರ ಅಂತ ಮಾಡಿದ್ದಾರೆ. ದುಡ್ಡಿಲ್ಲ ಇನ್ನೆಲ್ಲಿಂದ ಇಪ್ರೂವ್ ಆಗಲಿದೆ ಎಂದರು. ಕೊರೊನಾದಲ್ಲಿ ಸತ್ತವರಿಗೆ ಸಾಂತ್ವನ ಹೇಳುವ ಕೆಲಸ ಆಗಬೇಕಿತ್ತು, ಏನೂ ಆಗಲಿಲ್ಲ.
ರಾಜ್ಯದಲ್ಲಿ ನಿರುದ್ಯೋಗ, ಹಣಕಾಸು, ನೀರಾವರಿ ಸಮಸ್ಯೆ ಇದೆ. ಅದರ ಉಲ್ಲೇಖವೇ ಆಗಿಲ್ಲ. ಕಲ್ಯಾಣ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಬಗ್ಗೆ ಹಣ ನೀಡೋ ಬಗ್ಗೆ ಉಲ್ಲೇಖವೇ ಇಲ್ಲ. ಈ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ. ಆಪರೇಷನ್ ಕಮಲದ ಶಿಶು ಇವರು. ಇವರು ಅಭಿವೃದ್ಧಿ, ಜನರ ಕಲ್ಯಾಣ ಮಾಡದಿರೋದು ಭಾಷಣದಲ್ಲಿ ಗೊತ್ತಿದೆ.
ಇದು ನಿಷ್ಕ್ರಿಯ ಸರ್ಕಾರ ಅಂತಾ ಗೊತ್ತಾಗುತ್ತಿದೆ. ಒಬ್ಬರಿಗೆ 7 ಕೆಜಿ ಅಕ್ಕಿ ಇದೆ. ತಲಾ ಕುಟುಂಬ ಅಂತಿದೆ. ಇಡೀ ಕುಟುಂಬಕ್ಕೆ ಅಂತಾ ಇದೆ. ಜನರನ್ನು ವಂಚಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಸಭೆಗೆ ಕಪ್ಪು ಪಟ್ಟಿ ಧರಿಸಿ ಬಂದಿರೋ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಜಾಬ್ ವಿಚಾರವಾಗಿ ಕಪ್ಪು ಪಟ್ಟಿ ಧರಿಸಿದ್ದೇವೆ. ಕೇಸರಿ ಶಾಲು ಹಾಕಿ ಕಳಿಸಿದವರೇ ಇವರು. ಈಶ್ವರಪ್ಪ ಅವರ ಮೇಲೆ ಕ್ರಮ ತೆಗೆದುಕೊಂಡು ಕೇಸ್ ಹಾಕಬೇಕು. ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾಕೋದಾಗಿ ಹೇಳಿದ್ದರು. ಹಿಜಾಬ್ ಜೊತೆ ನಾರಾಯಣ ಗುರು ಸ್ತಬ್ಧ ಚಿತ್ರ ಸೇರಿಸಿ ಪ್ರತಿಭಟನೆ ಮಾಡಿದ್ದೇವೆ ಎಂದರು.
ರಾಜ್ಯಪಾಲರ ಭಾಷಣ ನೀರಸವಾಗಿತ್ತು: ಖಂಡ್ರೆ
ರಾಜ್ಯಪಾಲರ ಭಾಷಣದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿರುವುದು ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಜ್ಯಪಾಲರ ಭಾಷಣ ನೀರಸವಾಗಿತ್ತು. ಒಂದೇ ಒಂದು ಮನೆ ಕೊಟ್ಟಿಲ್ಲ. ಲಕ್ಷಾಂತರ ಮನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಅದು ಶುದ್ದ ಸುಳ್ಳು. ಶೇ.40ರಷ್ಟು ಕಮಿಷನ್ ಆರೋಪ ಹಾಗೂ ಉದ್ಯೋಗದ ಬಗ್ಗೆ ಉಲ್ಲೇಖವಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದರ ಬಗ್ಗೆ ಉಲ್ಲೇಖವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಘನ ಘೋರ ಅನ್ಯಾಯವಾಗಿದೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದ್ದಾರೆ. ಜನರಿಗೆ ದಾರಿ ತಪ್ಪಿಸಿದ್ದಾರೆ. ಈ ಸರ್ಕಾರ ಯಾರ ಪರವೂ ಇಲ್ಲ, ಜನಪರವೂ ಇಲ್ಲ, ರೈತರ ಪರವೂ ಇಲ್ಲ, ಯುವಕರ ಪರವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹಿಜಾಬ್ ಅರ್ಜಿಗಳ ವಿಚಾರಣೆ ಪ್ರಾರಂಭ.. ಮಾಧ್ಯಮಗಳು ಜವಾಬ್ದಾರಿಯಿಂದ ನಡೆದಕೊಳ್ಳಬೇಕು.. ಸಿಜೆ ಮನವಿ