ಬೆಂಗಳೂರು:ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿದ್ದ ಸಚಿವ ಆರ್.ಅಶೋಕ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು ರಾಜ್ಯ ಬಿಜೆಪಿ ನಾಯಕರಿಗೆ. ಹತ್ತು ವರ್ಷಗಳ ಹಿಂದೆ ಈ ರೀತಿ ಮೈಮೇಲೆ ಬಂದಾಗಲೇ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಡಾ.ಶೇಖ್ ಅಲಿ ಅವರಿಂದ 425 ಪುಟಗಳ ಪುಸ್ತಕ ಬರೆಸಿ ಸರ್ಕಾರದಿಂದಲೇ ಪ್ರಕಟಿಸಿದ್ದು ಎಂದು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಟಿಪ್ಪು ಸುಲ್ತಾನ್ ಎಂದ ಕೂಡಲೇ ಉರಿದುಬೀಳುವ ಆರ್.ಅಶೋಕ್ ಅವರೂ ಸೇರಿದಂತೆ ರಾಜ್ಯ ಬಿಜೆಪಿಯ ನಾಯಕರು, ಮೊದಲು ಅವರ ಸರ್ಕಾರವೇ ಟಿಪ್ಪು ಬಗ್ಗೆ ಬರೆಸಿ, ಪ್ರಕಟಿಸಿದ್ದ ಪುಸ್ತಕ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಗೋವಿಂದ ಕಾರಜೋಳ ಅವರು ಟಿಪ್ಪುವನ್ನು ಹಾಡಿ ಹೊಗಳಿದ ಮುನ್ನುಡಿಯನ್ನು ಓದಬೇಕು. "ಟಿಪ್ಪುವಿನ ರಾಷ್ಟ್ರೀಯ ರಾಜ್ಯದ ಕಲ್ಪನೆ, ಸಮರ ಕಲೆ, ಸುಧಾರಣೆಯ ಹುರುಪು, ಟಿಪ್ಪುವನ್ನು ಎಣೆಯಿಲ್ಲದ ನಾಯಕನನ್ನಾಗಿ ಮಾಡಿದೆ’’ ಎಂದು ತಾವೇ ಪ್ರಕಟಿಸಿದ್ದ ಪುಸ್ತಕದಲ್ಲಿ ಹೊಗಳಿದವರು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಚಿವ ಗೋವಿಂದ ಕಾರಜೋಳ. ಆಗ ತಾವೆಲ್ಲಿ ಅಡಗಿ ಕೂತಿದ್ದೀರಿ ಆರ್. ಅಶೋಕ್? ಎಂದು ಪ್ರಶ್ನಿಸಿದ್ದಾರೆ.