ಬೆಂಗಳೂರು :ವಿಧಾನಮಂಡಲ ಬಜೆಟ್ ಅಧಿವೇಶನ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಚ್ 4ರಂದು ಶಾಸಕಾಂಗ ಸಭೆ ಕರೆದಿದ್ದಾರೆ. ಮಾರ್ಚ್ 4ರಂದು ಬಜೆಟ್ ಮಂಡನೆಯಾಗಲಿದ್ದು, ಮಾ. 6ರಿಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ.
ಮಾರ್ಚ್ ತಿಂಗಳ ಕೊನೆಯವರೆಗೂ ಬಜೆಟ್ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಪಕ್ಷದ ಚರ್ಚೆ ಹಾಗೂ ಹೋರಾಟಗಳ ಸಂಬಂಧ ಸಮಾಲೋಚಿಸಲು ಮಹತ್ವದ ಶಾಸಕಾಂಗ ಸಭೆ ಕರೆಯಲಾಗಿದೆ.
ಮಾರ್ಚ್ 4ರಂದು ಸಂಜೆ 5 ಗಂಟೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ಆರಂಭವಾಗಲಿರುವ ಸಭೆಯಲ್ಲಿ ಮೇಕೆದಾಟು ಹೋರಾಟ, ಬಜೆಟ್, ಹಿಜಾಬ್, ರಾಷ್ಟ್ರಧ್ವಜದ ವಿಚಾರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಭೆಯ ಬಳಿಕ ಕಾಂಗ್ರೆಸ್ ಶಾಸಕರಿಗೆ ಭೋಜನ ಕೂಟ ಆಯೋಜಿಸಲಾಗಿದೆ.
ವಿಧಾನಪರಿಷತ್ ಹಾಗೂ ವಿಧಾನಸಭೆಯಲ್ಲಿ ಕೈಗೆತ್ತಿಕೊಳ್ಳುವ ಚರ್ಚೆಗಳು ಹಾಗೂ ಸರ್ಕಾರದ ಬಜೆಟ್ ಮೇಲಿನ ವಿವರಗಳ ಕುರಿತು ವಿಸ್ತೃತ ಸಮಾಲೋಚನೆ ನಡೆಸಿ, ಯಾವ್ಯಾವ ವಿಚಾರದ ಮೇಲೆ ಯಾರು ಮಾತನಾಡಬೇಕು, ಸರ್ಕಾರ ಯಾವ್ಯಾವ ಇಲಾಖೆಗಳ ಮೇಲೆ ನೀಡಿರುವ ಅನುದಾನಗಳು ಎಷ್ಟು? ಪೂರಕ ಬಜೆಟ್ಗೆ ನೀಡಬಹುದಾದ ಬೇಡಿಕೆಗಳ ಪಟ್ಟಿ ಸೇರಿದಂತೆ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ಶಾಸಕರ ಜೊತೆ ವರಿಷ್ಠರು ಸಮಾಲೋಚಿಸಲಿದ್ದಾರೆ.
ಇದನ್ನೂ ಓದಿ:‘ಹೃದಯ ಬಡಿಯುತ್ತಿದೆ.. ಭರವಸೆ ಇದೆ'; ಆತಂಕ ಮೂಡಿಸಿದ ಅಮಿತಾಭ್ ಬಚ್ಚನ್ ದಿಢೀರ್ ಟ್ವೀಟ್!
ಸದ್ಯ ಪಾದಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕರು ಬಜೆಟ್ ಮಂಡನೆ ನಂತರ ಯಾವ ರೀತಿ ಚರ್ಚೆ ಮಾಡಬಹುದು ಎಂಬುದರ ಕುರಿತು ಬಜೆಟ್ ಪ್ರತಿ ಇಟ್ಟುಕೊಂಡು ಚರ್ಚಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿಯೇ ಬಜೆಟ್ ಮಂಡನೆಯ ದಿನ ಸಂಜೆ ಸಭೆ ಕರೆದಿದ್ದು, ಸೋಮವಾರದಿಂದ ಯಾವ ವಿಚಾರಗಳನ್ನು ಚರ್ಚೆಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಸಮಾಲೋಚಿಸಲಿದ್ದಾರೆ.