ಬೆಂಗಳೂರು:ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯಲ್ಲಿ ಮರಳಿ ಸೇರ್ಪಡೆಯಾಗಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಮನಗರದತ್ತ ಪ್ರಯಾಣ ಬೆಳೆಸಿದ್ದಾರೆ.
ಅನಾರೋಗ್ಯ ಹಿನ್ನೆಲೆ ಬೆಂಗಳೂರಿಗೆ ಹಿಂದಿರುಗಿದ್ದ ಸಿದ್ದರಾಮಯ್ಯ:
ಭಾನುವಾರ ಆರಂಭವಾದ ಪಾದಯಾತ್ರೆಯಲ್ಲಿ ಮೊದಲ ಅರ್ಧ ದಿನ ಭಾಗಿಯಾಗಿದ್ದ ಅವರು, ಅನಾರೋಗ್ಯದ ಹಿನ್ನೆಲೆ ಮಧ್ಯಾಹ್ನದ ನಂತರ ಪಾದಯಾತ್ರೆ ಭಾಗಿಯಾಗದೇ ಬೆಂಗಳೂರಿಗೆ ಹಿಂದಿರುಗಿದ್ದರು. ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಅವರು ತಪಾಸಣೆಗೆ ಒಳಗಾಗಿ ಒಂದು ದಿನ ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ದಿಡೀರ್ ಅನಾರೋಗ್ಯ ಕಾಡಿದ ಹಿನ್ನೆಲೆ ತರಾತುರಿಯಲ್ಲಿ ಬೆಂಗಳೂರಿಗೆ ಆಗಮಿಸಿದ ಅವರು ಇಲ್ಲಿ ಕೂಲಂಕಷ ತಪಾಸಣೆಗೆ ಒಳಗಾಗಿದ್ದರು. ಕೋವಿಡ್ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆಯಿಲ್ಲ ಎನ್ನುವುದು ಖಾತರಿಯಾದಂತೆ, ಇದೀಗ 3ನೇ ದಿನದ ಪಾದಯಾತ್ರೆಯಲ್ಲಿ ಮರು ಸೇರ್ಪಡೆಯಾಗಲು ರಾಮನಗರ ದತ್ತ ಪ್ರಯಾಣ ಬೆಳೆಸಿದ್ದಾರೆ.
ಇಂದು ರಾಮನಗರ ದತ್ತ ಪ್ರಯಾಣ:
ಭಾನುವಾರ ಸಂಜೆ ವೈದ್ಯೋಪಚಾರಕ್ಕೊಳಗಾಗಿದ್ದ ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನದವರೆಗೂ ವಿಶ್ರಾಂತಿ ಪಡೆದಿದ್ದಾರೆ. ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲ್ ನಿಧನ ಹಿನ್ನೆಲೆ ಅವರ ಅಂತಿಮ ದರ್ಶನದಲ್ಲಿಯೂ ಭಾಗಿಯಾಗಿದ್ದರು.
ಇದೇ ಸಂದರ್ಭ ಮಂಗಳವಾರ ತಾವು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ತಿಳಿಸಿದ್ದರು. ಅಂತೆಯೇ ಇಂದು ರಾಮನಗರ ದತ್ತ ಪ್ರಯಾಣ ಬೆಳೆಸಿದ್ದು, ಕನಕಪುರದಿಂದ ಆರಂಭವಾಗುವ 3ನೇ ದಿನದ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಪಾದಯಾತ್ರೆ ಆರಂಭಕ್ಕೆ ಮುನ್ನವೇ ತಾವು ಸಂಪೂರ್ಣ ಪಾದಯಾತ್ರೆಯಲ್ಲಿ ನಡೆಯಲು ಸಾಧ್ಯವಿಲ್ಲ. ಅಲ್ಲಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಪಾದಯಾತ್ರೆಯ ಜವಾಬ್ದಾರಿಯನ್ನು ಹಾಗೂ ನೇತೃತ್ವವನ್ನು ಮುಂದುವರಿಸಿಕೊಂಡು ಸಾಗಿದ್ದಾರೆ.
ಮಹತ್ವದ ಸುದ್ದಿಗೋಷ್ಠಿ:
ಇಂದು ಕನಕಪುರ ತಲುಪುವ ಸಿದ್ದರಾಮಯ್ಯ ಮೊದಲು ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ತಮಗೆ ಎದುರಾದ ಅನಾರೋಗ್ಯ ಹಾಗೂ ಒಂದು ದಿನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದಕ್ಕೆ ಸ್ಪಷ್ಟೀಕರಣ ನೀಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರಿಕಾಗೋಷ್ಠಿ ಸಂದರ್ಭ ಉಪಸ್ಥಿತರಿರಲಿದ್ದಾರೆ.
ಪಾದಯಾತ್ರೆ ವಿಚಾರ ಬಂದಾಗ ಮಾತ್ರ ಯಾಕೆ ಅನಾರೋಗ್ಯ?
ಪಾದಯಾತ್ರೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಏಕಾಂಗಿಯಾಗಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಸಹಕಾರ ನೀಡುತ್ತಿಲ್ಲ. ಅನಾರೋಗ್ಯದ ನೆಪವೊಡ್ಡಿ ಪಾದಯಾತ್ರೆಯಿಂದ ದೂರವುಳಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಚಂದ್ರಶೇಖರ ಪಾಟೀಲ್ರ ಅಂತಿಮ ದರ್ಶನ ಪಡೆಯಲು ತೆರಳುವ ಸಂದರ್ಭ ಆರೋಗ್ಯವಾಗಿರುವ ಸಿದ್ದರಾಮಯ್ಯ ಪಾದಯಾತ್ರೆ ವಿಚಾರ ಬಂದಾಗ ಮಾತ್ರ ಯಾಕೆ ಅನಾರೋಗ್ಯ ಎನ್ನುತ್ತಾರೆ ಎಂದು ಬಿಜೆಪಿ ಪ್ರಶ್ನಿಸಿತ್ತು.
ಆದರೆ, ಈಗಾಗಲೇ ಡಿ.ಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಿ ಪಕ್ಷದ ರಾಜ್ಯ ನಾಯಕರ ಗಮನಕ್ಕೆ ತಂದು ಅನಾರೋಗ್ಯದ ಹಿನ್ನೆಲೆ ಒಂದು ದಿನ ವಿಶ್ರಾಂತಿ ಪಡೆದು ಹಿಂದಿರುಗುವುದಾಗಿ ಸಿದ್ದರಾಮಯ್ಯ ತಿಳಿಸಿ ಬೆಂಗಳೂರಿಗೆ ಹಿಂದಿರುಗಿದರು. ಇದೀಗ ಮುಂದುವರಿದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ:ಜನರ ಗಮನ ಸೆಳೆಯುತ್ತಿದೆ ಮೇಕೆದಾಟು ಪಾದಯಾತ್ರೆ