ಬೆಂಗಳೂರು ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್, ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಸೈಕಲ್ ಜಾಥಾ ನಡೆಸಿದ್ದು, ಡಿಕೆಶಿ, ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಭಾಗಿಯಾಗಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಡೀಸೆಲ್ - ಪೆಟ್ರೋಲ್ನಿಂದ 23 ಲಕ್ಷ ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹ ಮಾಡಿದೆ. ರಾಜ್ಯದಲ್ಲಿ ಒಂದು ವರ್ಷಕ್ಕೆ 7 ಲಕ್ಷ ಕೋಟಿ ರೂ. ಸುಂಕ ಸಂಗ್ರಹಿಸಲಾಗ್ತಿದೆ. ಬೆಲೆ ಇಳಿಕೆಗೆ ಆಯಿಲ್ ಬಾಂಡ್ ಹೊರೆಯಾಗಲ್ಲ. ತಮಿಳುನಾಡಿನಲ್ಲಿ 3 ರೂ. ಕಡಿಮೆ ಮಾಡಲಾಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎರಡೂ ತೈಲಗಳ ಮೇಲಿನ ಬೆಲೆ ಇಳಿಸಲಿ ಎಂದು ಒತ್ತಾಯಿಸಿದರು.
ಬಿಎಸ್ವೈಗೆ ಸಿದ್ದು ಟಾಂಗ್
ತೈಲ ದರ ಏರಿಕೆ ಖಂಡಿಸಿ ಈ ಹಿಂದೆ ಮಿಸ್ಟರ್ ವಾಜಪೇಯಿ ಎತ್ತಿನಗಾಡಿಯಲ್ಲಿ ಬಂದಿದ್ರು. ಇದಕ್ಕೆ ಯಡಿಯೂರಪ್ಪ ಏನ್ ಹೇಳ್ತಾರೆ ಅನ್ನೋ ಮೂಲಕ ಸೈಕಲ್ ಜಾಥಾ ಟೀಕಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.
‘ಭಂಡ ಸರ್ಕಾರ ಬೆಲೆ ಇಳಿಸಲ್ಲ’
ಪ್ರಶ್ನಿಸಿದ್ರೆ ಕೇಸ್ ಹಾಕುತ್ತಾರೆ ಅನ್ನೋ ಭಯ ಜನರಿಗಿದೆ. ರಾಜ್ಯದ ಜನತೆ ಮುಂದಿನ ಬಾರಿ ಯಡಿಯೂರಪ್ಪ ಅಲ್ಲ, ಅವರ ಥರದ ನೂರು ಜನ ಬಂದರೂ ಬಿಜೆಪಿ ಸೋಲಿಸುತ್ತಾರೆ. ರಾಜ್ಯದಲ್ಲಿರುವುದು ಹೇಡಿ ಸರ್ಕಾರ, ಭಂಡ ಸರ್ಕಾರ. ಈ ಸರ್ಕಾರ ಯಾವುದರ ಬೆಲೆಯನ್ನೂ ಇಳಿಸಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟ ಗೊತ್ತಿಲ್ಲ. ಜನರ ಕಣ್ಣೀರ ಬೆಲೆ ಗೊತ್ತಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಹೇಳಿದರು.
‘ನಾನು 224 ಶಾಸಕರ ಸಂಪರ್ಕದಲ್ಲಿದ್ದೇನೆ’
ಆಪರೇಷನ್ ಹಸ್ತ ಮಾಡುತ್ತಿದೆ ಎಂಬ ಮಾಜಿ ಸಿಎಂ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು 224 ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ಯಾರ ಜೊತೆನೂ ಮಾತುಕತೆ ನಡೆಸಿಲ್ಲ. ಅಧ್ಯಕ್ಷರನ್ನು ಬೇಕಾದರೆ ಕೇಳಿ ಎಂದರು.