ಕರ್ನಾಟಕ

karnataka

ETV Bharat / state

ದೇವೇಗೌಡರ ನಿವಾಸಕ್ಕೆ ಆರ್ ಅಶೋಕ್ ಭೇಟಿ: ಉತ್ತಮ ಕೆಲಸ ಮಾಡುವಂತೆ ಗೌಡರ ಸಲಹೆ

ಬೆಂಗಳೂರಿನ ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಜೆಡಿಎಸ್ ವರಿಷ್ಠ ದೇವೇಗೌಡರಿಂದ ಆಶೀರ್ವಾದ ಪಡೆದರು.

Ashok was blessed by JDS leader Deve Gowda
ಜೆಡಿಎಸ್ ವರಿಷ್ಠ ದೇವೇಗೌಡರಿಂದ ಆರ್ ಅಶೋಕ್ ಅವರು ಆಶೀರ್ವಾದ ಪಡೆದರು.

By ETV Bharat Karnataka Team

Published : Nov 18, 2023, 7:57 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಗೌರವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ, ಜಂಟಿಯಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಲಹೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಆರ್ ಅಶೋಕ್ ಭೇಟಿ ನೀಡಿ, ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ ಪಡೆದುಕೊಂಡರು. ನಂತರ ರಾಜಕೀಯ ವಿಷಯಗಳ ಕುರಿತು ಕೆಲಕಾಲ ಮಹತ್ವದ ಮಾತುಕತೆ ನಡೆಸಿದರು.

ಗೌಡರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್​ ಅಶೋಕ್ ಅವರು, ರಾಜ್ಯದ ಮುತ್ಸದ್ದಿ , ಹಿರಿಯರು, ಮಣ್ಣಿನ ಮಗ ದೇವೇಗೌಡ ಅವರನ್ನು ಭೇಟಿ ಮಾಡಿ ಸಾಕಷ್ಟು ಹೊತ್ತು ಚರ್ಚೆ ಮಾಡಿದೆ. ಕಾವೇರಿ, ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸೂಚನೆ ನೀಡಿ, ಪೂರ್ತಿ ಸಹಕಾರ ನೀಡುತ್ತೇನೆ ಎಂದರು. ವಿಪಕ್ಷ ನಾಯಕನಾಗಿದ್ದಕ್ಕೆ ದೊಡ್ಡ ಗೌಡರು ಅಭಿನಂದನೆ ಸಲ್ಲಿಸಿದರು. ನೀವು ಕುಮಾರಸ್ವಾಮಿ ಒಟ್ಟಾಗಿ ಕೆಲಸ ಮಾಡಿ ಅಂತ ಸಲಹೆ ನೀಡಿದರು ಎಂದು ನೂತನ ಪ್ರತಿಪಕ್ಷ ನಾಯಕರು ತಿಳಿಸಿದರು.

ಯಾವುದೇ ಸಮಯದಲ್ಲಿ ಸಹಾಯ, ಆಶೀರ್ವಾದ ಇರುತ್ತದೆ. ಮೋದಿಯವರಿಗೆ ಗೌರವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ ಅಂದರು. ನಾನು ಕೂಡ ಲೋಕಸಭೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತೇನೆ ಅಂದಿದ್ದಾರೆ. 60 ವರ್ಷದ ರಾಜಕೀಯ ಜೀವನದಲ್ಲಿ ರಾಜ್ಯದಲ್ಲಿ ಇಂಥ ಕೆಟ್ಟ ಸರ್ಕಾರ ನೋಡಿಲ್ಲ. ಒಟ್ಟಿಗೆ ಹೋಗಿ ದುರಾಡಳಿತದ ಸರ್ಕಾರವನ್ನು ತೆಗೆದುಹಾಕಿ ಎಂದು ಹೇಳಿದ್ದಾರೆ ಎಂದರು.

ಎರಡು ಪಕ್ಷಗಳ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ಮಾತುಕತೆ ‌ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಒಳಗೆ, ಹೊರಗೆ ಎರಡು ಪಕ್ಷಗಳು ಜಂಟಿಯಾಗಿ ಹೋರಾಟ ಮಾಡ್ತೀವಿ. ಇಬ್ಬರು ಸೇರಿ ರಾಜ್ಯ ಸರ್ಕಾರಕ್ಕೆ ನಡುಕ ಹುಟ್ಟುವ ಕೆಲಸ ಮಾಡುತ್ತೇವೆ ಎಂದು ಆರ್​ ಅಶೋಕ್​ ಇದೇ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನರಿಗೆ ಭರವಸೆ ನೀಡಿದರು.

ಜಮೀರ್ ಮಾತಿಗೆ ದೇವೇಗೌಡರು ಬೇಸರ:ಕೋಮು ಸೌಹಾರ್ದತೆ ಹಾಳಾಗುವ ರೀತಿ ಜಮೀರ್ ಮಾತನಾಡಿದ್ದಾರೆ ಎಂದು ಜಮೀರ್ ಮಾತಿಗೆ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತ ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಬೆಳಗ್ಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿ ಒಟ್ಟಾಗಿ ಹೋರಾಟ ಮಾಡ್ತೀವಿ. ಹೆಚ್‌ಡಿಡಿ, ಬಿಎಸ್​ವೈ ರಾಜಕೀಯ ತಂತ್ರಗಾರಿಕೆಯನ್ನು ನಾವು ಬಳಕೆ ಮಾಡಿಕೊಳ್ತೀವಿ ಎಂದು ಅವರು ತಿಳಿಸಿದರು.

ಇದನ್ನೂಓದಿ:ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ, ಅವರಿಗೆ ಶುಭ ಕೋರುತ್ತೇನೆ: ಡಿ ಕೆ ಶಿವಕುಮಾರ್​

ABOUT THE AUTHOR

...view details