ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು 2023-24ನೇ ಶೈಕ್ಷಣಿಕ ಸಾಲಿನಿಂದ ತರಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಜಂಟಿಯಾಗಿ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹತ್ತನೇ ತರಗತಿಯಲ್ಲಿ ಮೂರು ಬಾರಿ ಪರೀಕ್ಷೆ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಎಂದು ವರ್ಷದಲ್ಲಿ ಮೂರು ಬಾರಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೋ ಒಂದು ಕಾರಣಕ್ಕೆ ವಿದ್ಯಾರ್ಥಿಗಳು ಫೇಲ್ ಆದರೆ ಇಡೀ ವರ್ಷ ಅವರ ಜೀವನ ವ್ಯರ್ಥವಾಗಬಾರದು. ಪರೀಕ್ಷೆಗಳು ಮಕ್ಕಳನ್ನು ಫೈಲ್ ಮಾಡುವುದಕ್ಕಲ್ಲ, ಜೀವನದ ಬಗ್ಗೆ ಕಲಿಕೆಗಾಗಿ ಇರಬೇಕು ಎಂದು ಹೇಳಿದ ಅವರು, ಇದರಿಂದ ಅನುತೀರ್ಣಗೊಂಡ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅವಕಾಶ ಸಿಗುತ್ತದೆ ಹಾಗೂ ಕಡಿಮೆ ಅಂಕ ಪಡೆದವರು ಓದಿ ಮತ್ತೆ ಹೆಚ್ಚು ಅಂಕ ಗಳಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಾಲಿ ಪರೀಕ್ಷಾ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಈ ಪದ್ಧತಿಯ ಪರೀಕ್ಷೆಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಮತ್ತು ಪರೀಕ್ಷಾ ಆತಂಕವನ್ನು ಸೃಷ್ಟಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನಧಾರಣೆ, ಅರ್ಥಪೂರ್ಣ ಕಲಿಕೆ, ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಗಳಿಸಿದ ಅಂಕಗಳಿಂದ ತೃಪ್ತರಾಗದಿದ್ದರೆ, ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ.
ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಪೂರಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತಿದೆ. ಈ ವ್ಯವಸ್ಥೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದಿಲ್ಲ. ಏಕೆಂದರೆ ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಯಾವುದೇ ಆಯ್ಕೆಯಿರುವುದಿಲ್ಲ. ನಾವು ಸುಧಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, 1, 2, ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ವಿಷಯವಾರು ಅಂಕವನ್ನು ಉಳಿಸಿಕೊಳ್ಳಲು ಅವಕಾಶವನ್ನು ಒದಗಿಸಿದಂತಾಗುತ್ತದೆ ಮತ್ತು ಮುಂದಿನ ವ್ಯಾಸಂಗಕ್ಕೆ ಅಥವಾ ಉದ್ಯೋಗಕ್ಕೆ ಆಯ್ಕೆ ಪುಕ್ರಿಯೆಗಳಲ್ಲಿ ಉತ್ತಮ ಅವಕಾಶಗಳನ್ನು ಒದಗಿಸಿದಂತಾಗುತ್ತದೆ ಎಂದು ವಿವರಿಸಿದರು.
ಶಾಲೆಗೆ ಹೋಗುವುದಕ್ಕೆ ಮಕ್ಕಳಿಗೆ ಶಕ್ತಿ ಬೇಕು. ಮುಂಚೆ ಮೊಟ್ಟೆ ವಾರಕ್ಕೆ ಒಂದು ಕೊಡುತ್ತಿದ್ದೆವು. ಈಗ ಒಂದನೇ ತರಗತಿಯಿಂದ 8 ನೇ ತರಗತಿಯವರೆಗೆ ಒಂದು ಮೊಟ್ಟೆ ಕೊಡಲಾಗುತ್ತಿತ್ತು. ಹತ್ತನೇ ತರಗತಿವರೆಗೆ ವಾರಕ್ಕೆ ಎರಡು ಮೊಟ್ಟೆಯನ್ನು ಕೊಡುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಮಾಡಿದರು. 58 ಲಕ್ಷ ಮಕ್ಕಳಿಗೆ ಈಗ ರಾಜ್ಯ ಮಟ್ಟದಲ್ಲಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದು ಹೇಳಿದರು.