ಬೆಂಗಳೂರು: ಹುಲಿ ಉಗುರು ಸೇರಿದಂತೆ ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ಇಟ್ಟುಕೊಳ್ಳಲು ಕಾನೂನಿನಲ್ಲಿ ಅಕಾಶವಿಲ್ಲದ ಕಾರಣ, ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡಬಹುದು. ಕೇರಳ ಸರ್ಕಾರ ಕೈಗೊಂಡ ನಿರ್ಧಾರ ಮತ್ತು ನಮ್ಮ ಸರ್ಕಾರದ ಉದ್ದೇಶಿತ ನಿರ್ಧಾರ ವಿಭಿನ್ನವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಕಡತವನ್ನು ಪುನರ್ ಮಂಡಿಸಲು ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇದಕ್ಕೂ ಮುನ್ನ ವಿಕಾಸಸೌಧದ ಅರಣ್ಯ ಸಚಿವರ ಕಚೇರಿಯಲ್ಲಿ ಇಂದು ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾಹಿತಿ ನೀಡಿದರು. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ, ಕಾನೂನಿನ ಅರಿವಿಲ್ಲದೇ ತಮ್ಮ ಬಳಿ ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ನೋಂದಣಿ ಮಾಡದೇ ಇಟ್ಟುಕೊಂಡಿರುವ ಮುಗ್ಧ ಜನತೆಗೆ ಕಿರುಕುಳ ಆಗದ ರೀತಿಯಲ್ಲಿ ಒಂದು ಬಾರಿ ಕೊನೆಯ ಅವಕಾಶ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಮೂರು ತಿಂಗಳ ಕಾಲಾವಕಾಶ ನೀಡಲು ಉದ್ದೇಶಿಸಿದ್ದು, ಈ ವಿಚಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ವನ್ಯಜೀವಿಗಳ ಯಾವುದೇ ಅಂಗಾಂಗವನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಪ್ರಸ್ತುತ ವನ್ಯಜೀವಿಗಳ ಅಂಗಾಂಗ ಇಟ್ಟುಕೊಳ್ಳಲು ಪರಾವನಗಿ ನೀಡುವುದಿಲ್ಲ. 1978ರ ಪೂರ್ವದಲ್ಲಿ ಈ ವನ್ಯಜೀವಿಗಳ ಅಂಗಾಂಗಗಳನ್ನು ಇಟ್ಟುಕೊಳ್ಳಲು ನೋಂದಣಿ ಮಾಡಿಕೊಳ್ಳದೇ ಇರುವವವರು, ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮರಳಿಸಿದ ಅಂಗಾಂಗಗಳನ್ನು ಸರ್ಕಾರ ನಾಶ ಮಾಡಲಿದೆ. ಈಗಿರುವ ಕಾನೂನಿನ ಪ್ರಕಾರ ವನ್ಯಜೀವಿಯ ಅಂಗಾಂಗಗಳನ್ನು ಯಾರು ಇಟ್ಟುಕೊಳ್ಳುವಂತಿಲ್ಲ. ಸಾಗಣೆ, ಮಾರಾಟ ಮಾಡುವಂತಿಲ್ಲ. ಕೆಲವರು ಹುಲಿ ಉಗುರು, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ಅಂಗಾಂಗಗಳನ್ನು ಕಾನೂನಿನ ಅರವಿಲ್ಲದೇ ಇಟ್ಟುಕೊಂಡಿದ್ದವರಿಗೆ ಒಂದು ಅವಕಾಶ ದೊರೆಯಲಿದೆ. ವನ್ಯಜೀವಿ ಅಂಗಾಂಗಳನ್ನು ಮರಳಿಸಿದವರಿಗೆ ಯಾವುದೇ ದಂಡ ಹಾಕುವುದಿಲ್ಲ, ಕೇಸ್ ಸಹ ದಾಖಲಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.