ಬೆಂಗಳೂರು: ಫ್ರೀಡಂ ಪಾರ್ಕ್ನ ಒಂದು ಬದಿಯಲ್ಲಿ ಬೃಹತ್ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗ್ತಿದೆ. ವಾಹನಗಳನ್ನು ಪಾರ್ಕ್ ಮಾಡೋದು ಅಷ್ಟೇ ಅಲ್ಲದೆ ಅದರ ಒಂದು ಮಳಿಗೆಯಲ್ಲೇ ಪ್ರತಿಭಟನೆ ಮಾಡಬೇಕೆಂಬ ನಿಯಮ ತರುವ ಸಾಧ್ಯತೆಯಿದೆ.
ಫ್ರೀಡಂ ಪಾರ್ಕ್ನಲ್ಲಿ ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದಲ್ಲೇ ಪ್ರತಿಭಟನೆಗೆ ಜಾಗ - ಪ್ರತಿಭಟನೆಗೆ ಕಾರ್ ಪಾರ್ಕಿಂಗ್ ಕಟ್ಟಡದಲ್ಲೇ ಅವಕಾಶ
ಫ್ರೀಡಂ ಪಾರ್ಕ್ನ ಒಂದು ಬದಿಯಲ್ಲಿ ಬೃಹತ್ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗ್ತಿದ್ದು, ಮಾರ್ಚ್ 31 ಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಆ ಜಾಗದಲ್ಲೇ ಪ್ರತಿಭಟನೆಗೆ ಜಾಗ ಕಲ್ಪಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಮಾರ್ಚ್ 31 ಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯಲಿದೆ. 550 ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ. ಈವರೆಗೆ ನಡೆಯುತ್ತಿದ್ದ ಪ್ರತಿಭಟನೆಗಳಿಂದ ಅಲ್ಲಿ ಓಡಾಡುವವರಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಕಾರ್ ಪಾರ್ಕಿಂಗ್ ಜಾಗದಲ್ಲೇ ಪ್ರತಿಭಟನೆಗೆ ಜಾಗ ಕಲ್ಪಿಸಲಾಗಿದೆ. 30 ಶೌಚಾಲಯ, ಸ್ನಾನದ ಗೃಹಗಳಿದ್ದು, ಬೇರೆ ಬೇರೆ ಜಿಲ್ಲೆಯಿಂದ ಬರುವ ಪ್ರತಿಭಟನಾಕಾರರಿಗೆ ಎರಡು ಮೂರು ದಿನದ ಪ್ರತಿಭಟನೆ ನಡೆಸುವಾಗ ಶೌಚಾಲಯಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಬಿಬಿಎಂಪಿಯ ಈ ವ್ಯವಸ್ಥೆ ಪ್ರತಿಭಟನಾಕಾರರು, ಸಂಘ ಸಂಸ್ಥೆಗಳು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.