ಬೆಂಗಳೂರು:ಕೇಂದ್ರ ಸರ್ಕಾರದ ಮಹತ್ವದ ಮಾದರಿ ಬಾಡಿಗೆದಾರಿಕೆ ಕಾಯ್ದೆ -2021 ಅನ್ನು ರಾಜ್ಯದಲ್ಲೂ ಜಾರಿ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದರು. ಇದೀಗ ಉದ್ದೇಶಿತ ಕಾಯ್ದೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಸಂಪುಟವು ಮಾದರಿ ಬಾಡಿಗೆದಾರಿಕೆ ಕಾಯ್ದೆ-2021 ಅನ್ನು ಇತ್ತೀಚೆಗೆ ಅನುಮೋದಿಸಿದ್ದು, ಹೊಸದಾಗಿ ರೂಪುಗೊಂಡ ಕಾಯ್ದೆ ಕಾರ್ಯಗತ ಮಾಡುವುದನ್ನು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಬಾಡಿಗೆ ಮುಂಗಡ ಹಣ ಎರಡು ತಿಂಗಳು ಮೀರಬಾರದು ಎನ್ನುವುದು ಒಂದು ಪ್ರಮುಖ ಅಂಶವಾದರೆ, ಮಾಲೀಕರು ಮತ್ತು ಬಾಡಿಗೆದಾರರು ಗಮನಿಸುವ ಹಲವು ಅಂಶಗಳು ಕಾಯ್ದೆಯಲ್ಲಿ ಅಡಕವಾಗಿವೆ.
ಮಾದರಿ ಕಾಯ್ದೆ- ಕ್ರೆಡಾಯ್
ಕರ್ನಾಟಕ ಕ್ರೆಡಾಯಿ ಅಧ್ಯಕ್ಷ ಸುರೇಶ್ ಪ್ರಭು ಬೆಂಗಳೂರಿನಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಪ್ರಸ್ತಾಪಿಸಿದ ಹಿಡುವಳಿ ಕಾಯ್ದೆ ಹೊಸ ಮಾದರಿಯದ್ದಾಗಿದೆ. ರಾಜ್ಯಗಳಿಂದ ಅಳವಡಿಸಬೇಕಾಗಿರುವ ಕಾಯ್ದೆಯು ಮಿಶ್ರ ದೃಷ್ಟಿಕೋನವನ್ನು ಹೊಂದಿದೆ ಎಂದಿದ್ದಾರೆ.
'ಸಾಮಾನ್ಯ ಜನರಿಗೆ ಅನುಕೂಲ'
ಚಿಲ್ಲರೆ ವ್ಯಾಪಾರಿಯೊಬ್ಬರು ಕಾಯ್ದೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅನುಷ್ಠಾನಗೊಳಿಸುವಾಗ ರಾಜ್ಯ ಸರ್ಕಾರ ಚಿಲ್ಲರೆ ವ್ಯಾಪಾರಿಗಳನ್ನು ಮತ್ತು ಸಣ್ಣ ಹಿಡುವಳಿದಾರರನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ. ಈ ಹೊಸ ಕಾಯ್ದೆಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಬೇಕು. ಮುಂಗಡ ಹಣ ಕಡಿತವು ನನ್ನಂತಹ ಸಾಮಾನ್ಯ ಜನರಿಗಾಗಿ ದೊಡ್ಡ ಪರಿಹಾರವಾಗಿದೆ ಎಂದಿದ್ದಾರೆ.
ಈಗ ಅಡ್ವಾನ್ಸ್ ಬಾಡಿಗೆ 10 ತಿಂಗಳಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಸರಾಸರಿ ಸಾಮಾನ್ಯ ಅಂಗಡಿಯ ಬಾಡಿಗೆ 35 ಸಾವಿರ ರೂ ಆಗಿದೆ. ಈ ನಿಟ್ಟಿನಲ್ಲಿ 3.5 ಲಕ್ಷ ರೂ. ಯಾವುದೇ ಆದಾಯವಿಲ್ಲದ ಹೂಡಿಕೆಯಾಗಲಿದೆ. ಈ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದರೆ ನನ್ನಂತಹ ಅಂಗಡಿ ಮಾಲೀಕರು ಭಾರಿ ಪ್ರಮಾಣದ ಹಣವನ್ನು ಉಳಿಸಬಹುದು ಮತ್ತು ಅದೇ ಹಣವನ್ನು ಹೂಡಿಕೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
'ವಯೋವೃದ್ಧರಿಗೆ ತೊಂದರೆ'
ಅನೇಕ ವಸತಿ ಮಾಲೀಕರು ಜೀವನೋಪಾಯಕ್ಕಾಗಿ ಬಾಡಿಗೆ ಆದಾಯವನ್ನು ಅವಲಂಬಿಸಿದ್ದಾರೆ ಎಂದು 63 ವರ್ಷದ ಮನೆ ಮಾಲೀಕ ಸೀತಾರಾಮ್ ಶೆಟ್ಟಿ ಹೇಳುತ್ತಾರೆ. ನನ್ನ ಸ್ವಂತ ಮನೆಯನ್ನು 15 ಸಾವಿರ ರೂಪಾಯಿ ಬಾಡಿಗೆಗೆ ಕೊಟ್ಟಿದ್ದೇನೆ. ನಾನು 10 ತಿಂಗಳ ಮುಂಗಡವನ್ನು ಐದು ವರ್ಷಗಳ ಕಾಲ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಟ್ಟಿದ್ದೇನೆ. ಪ್ರಸ್ತುತ ಬಡ್ಡಿದರದಲ್ಲಿ ನಾನು ಐದು ವರ್ಷಕ್ಕೆ 2 ಲಕ್ಷ ಗಳಿಸಬಹುದು. ನನ್ನ ವಯಸ್ಸಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಕಾಯ್ದೆಯಿಂದ ನನ್ನಂಥ ವಯೋವೃದ್ಧರಿಗೆ ತೊಂದರೆಯಾಗಲಿದೆ ಹೇಳಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದೇನು?
ಕೆಲ ದಿನಗಳ ಹಿಂದೆ ಆರ್ ಅಶೋಕ್ ವಿಧಾನಸೌಧದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಮಾದರಿ ಬಾಡಿಗೆದಾರಿಕೆ ಕಾಯ್ದೆ ರಾಜ್ಯದಲ್ಲೂ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆದಿದೆ ಎಂದಿದ್ದರು.
ಇದನ್ನೂ ಓದಿ:ಬಾಡಿಗೆ ಮನೆಯಲ್ಲಿ ಇರುವಿರಾ? ನಿಮಗಿದೆ ಶುಭ ಸುದ್ದಿ!
ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಸರಿದೂಗಿಸುವುದು, ನ್ಯಾಯಸಮ್ಮತ ಪರಿಹಾರದ ಮೂಲಕ ಬಾಡಿಗೆದಾರ ಹಾಗೂ ಮಾಲೀಕನ ಸಂಬಂಧ ಸುಧಾರಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶ. ನಾವು ಪ್ರಸ್ತುತ ಬಾಡಿಗೆ ಕಾಯ್ದೆಯನ್ನು ಸರಳೀಕರಿಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದರು.