ಬೆಂಗಳೂರು:ಕಾಂಗ್ರೆಸ್ನ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವಿಳಂಬಕ್ಕೆ ಸಂಖ್ಯಾಬಲದ ಕೊರತೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಮೇಶ್ ಅವರು ಬಿಜೆಪಿಗೆ ಕರೆತರುತ್ತಿರುವ ಶಾಸಕರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಕಾರಣಕ್ಕೆ ಪಕ್ಷದ ಹೈಕಮಾಂಡ್ ಇನ್ನೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗ್ತಿದೆ.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಡೋಲಾಯಮಾನ ಸ್ಥಿತಿಗೆ ರಮೇಶ್ ಜಾರಕಿಹೊಳಿ ಸಿಲುಕಿದ್ದಾರೆ. ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮಾನಸಿಕವಾಗಿ ಸಿದ್ಧರಾಗಿರುವ ಅವರು ಬೆಂಬಲಿಗ ಶಾಸಕರ ತಂಡವನ್ನು ಕಟ್ಟುತ್ತಿದ್ದಾರೆ. ಆದರೆ ಅವರು ನಿರೀಕ್ಷಿಸಿದಷ್ಟು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಸಿದ್ಧರಿಲ್ಲ ಎನ್ನುವ ಮಾಹಿತಿ ಕಾಂಗ್ರೆಸ್ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಕೂಡ್ಲಗಿ ಶಾಸಕ ನಾಗೇಂದ್ರ, ಆನಂದ್ ಸಿಂಗ್, ಬಿ.ಸಿ ಪಾಟೀಲ್, ಡಿ.ಸುಧಾಕರ್ ಹೆಸರುಗಳು ರಮೇಶ್ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಕೇಳಿಬರುತ್ತಿವೆ. ಆದ್ರೆ ಅವರೆಲ್ಲ ಕಾಂಗ್ರೆಸ್ ಪಕ್ಷ ತೊರೆಯಲು ಸಿದ್ದರಿಲ್ಲ ಎನ್ನಲಾಗಿದೆ. ರೋಷನ್ ಬೇಗ್ ಕೂಡ ಪಕ್ಷದ ನಾಯಕರ ವಿರುದ್ಧ ದನಿ ಎತ್ತಿದ್ದರೂ ಕೈ ಬಿಡುವ ಸೂಚನೆ ಇಲ್ಲ ಎಂದು ಹೇಳಲಾಗ್ತಿದೆ.