ಬೆಂಗಳೂರು:ರಾಜ್ಯದ ಎಲ್ಲ ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ ಒದಗಿಸುವ ಕುರಿತು ಆಯುಕ್ತಾಲಯ ಸುತ್ತೋಲೆ ಹೊರಡಿಸಿದೆ. ಆಪ್ತ ಸಮಾಲೋಚನೆ ಜತೆಗೆ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಒಂದು ಡಿ-ಅಡಿಕ್ಷನ್ ಕೇಂದ್ರವನ್ನು ಪ್ರಾರಂಭಿಸುವಂತೆ ತಿಳಿಸಲಾಗಿದೆ.
ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಮಕ್ಕಳಿಗೆ ಕೌನ್ಸೆಲಿಂಗ್ ನೀಡಲು ಸಂಸ್ಥೆಯ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕೌನ್ಸಿಲರ್ ಮತ್ತು ಸ್ವಯಂ ಸೇವಕರಿಗೆ ಸೂಕ್ತ ತರಬೇತಿ ನೀಡಬೇಕು. ಇದಕ್ಕಾಗಿ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ, ಜಿಲ್ಲಾ ಆಸ್ಪತ್ರೆಗಳಲ್ಲಿರುವ ಜಿಲ್ಲಾ ಮಾನಸಿಕ ತಜ್ಞರು/ಜಿಲ್ಲಾ ಮಾನಸಿಕ ಆರೋಗ್ಯ ತಂಡ ವೈದ್ಯರು ಮಕ್ಕಳ ತಜ್ಞರುಗಳಿಂದ ಸೂಕ್ತ ತರಬೇತಿ ಪಡೆಯಬಹುದು.