ಬೆಂಗಳೂರು :ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ವೈದ್ಯರ ಜೊತೆ ಮಾತುಕತೆ ನಡೆಸಿದ ಬಳಿಕ ಇಂದಿನಿಂದ ಹೊರರೋಗಿ ವಿಭಾಗ (ಒಪಿಡಿ) ತೆರೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀ ರಾಮುಲು ಅನುಮತಿ ನೀಡಿದ್ದಾರೆ.
ಇಂದಿನಿಂದ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಪುನರಾರಂಭ - OPD service in private hospitals reopen from today
ಕೊರೊನಾ ಭೀತಿ ಹಿನ್ನೆಲೆ ಕಳೆದ ಒಂದುವರೆ ತಿಂಗಳಿನಿಂದ ಬಂದ್ ಮಾಡಲಾಗಿದ್ದ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ(ಒಪಿಡಿ)ವನ್ನು ಇಂದಿನಿಂದ ತೆರೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀ ರಾಮುಲು ಅನುಮತಿ ನೀಡಿದ್ದಾರೆ
ಕೊರೊನಾ ಭೀತಿ ಹಿನ್ನೆಲೆ ಕಳೆದ ಒಂದುವರೆ ತಿಂಗಳಿನಿಂದ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿತ್ತು. ಆದರೆ, ಇದೀಗ ಕೋವಿಡ್ ಅಲ್ಲದ ಇತರ ಕಾಯಿಲೆಯ ರೋಗಿಗಳ ಚಿಕಿತ್ಸೆಗೆ ಸಮಸ್ಯೆ ಉಂಟಾದ ಹಿನ್ನೆಲೆ ಒಪಿಡಿ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಕೊರೊನಾ ಲಕ್ಷಣಗಳಿರುವವರು ಕಂಡು ಬಂದಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಚಿಕಿತ್ಸೆಗೆಂದು ಬಂದವರಲ್ಲಿ ಕೊರೊನಾ ರೋಗಿಗಳು ಕಂಡು ಬಂದಲ್ಲಿ ಆಸ್ಪತ್ರೆ ಮುಚ್ಚುವುದಿಲ್ಲ. ಬದಲಾಗಿ ಸ್ಯಾನಿಟೈಸ್ ಮಾಡಿ ಕಾರ್ಯಾಚರಿಸಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಕಂಟೇನ್ಮೆಂಟ್ ಝೋನ್ನಿಂದ ಬರುವ ಗರ್ಭಿಣಿಯರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡುವಂತೆ ಆದೇಶಿಸಲಾಗಿದೆ.
ಕೊರೊನಾ ಪಾಸಿಟಿವ್ ವ್ಯಕ್ತಿಗೆ ಚಿಕಿತ್ಸೆ ನೀಡಿದ ಖಾಸಗಿ ವೈದ್ಯರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಖಾಸಗಿ ವೈದ್ಯರನ್ನು, ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇಡುವುದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಆಕಸ್ಮಿಕವಾಗಿ ಕೋವಿಡ್ ರೋಗಿ ಬಂದರೆ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ಕೊಡಬೇಕು. ಬಳಿಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಕೋವಿಡ್ ರೋಗಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆ ನಿರಾಕರಿಸಬಾರದು. ಎಲ್ಲಾ ಖಾಸಗಿ ಆಸ್ಪತ್ರೆಗಳು ಒಂದು ಪ್ರತ್ಯೇಕ ವಾರ್ಡ್ನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಿದರೆ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳು ಸರ್ಕಾರದ ಜೊತೆ ಕೈಜೋಡಿಸಬೇಕು ಎಂಬ ನಿರ್ದೇಶನಗಳನ್ನು ನೀಡಲಾಗಿದೆ.