ಬೆಂಗಳೂರು: ಲಾಕ್ಡೌನ್ ಅನ್ಲಾಕ್ ಬಳಿಕ ನಿಧಾನವಾಗಿ ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಿದ್ದ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರವುಗೊಳಿಸಿ ಒಪಿಡಿ ಸೇವೆ ಆರಂಭಿಸಲಾಗಿದೆ. ಆದರೆ, ಒಪಿಡಿಗೆ ಬರಲು ಕೋವಿಡೇತರ ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯಾದ್ಯಂತ ಒಪಿಡಿ ಸೇವೆ ಆರಂಭವಾಗಿದೆ. ಆದರೆ, ಜನರು ಮಾತ್ರ ಆಸ್ಪತ್ರೆಗಳತ್ತ ಮುಖ ಮಾಡುತ್ತಿಲ್ಲ. ಈ ಬಗ್ಗೆ ಯಾಕೆ ಅಂತಾ ಕೋವಿಡೇತರ ರೋಗಿಗಳನ್ನು ವಿಚಾರಿಸಿದರೆ, ಕೊರೊನಾ ಪರೀಕ್ಷೆ ಮಾಡಿಸಿದ ನಂತರ ಚಿಕಿತ್ಸೆ ಕೊಡಲಾಗ್ತಿದೆ. ಇತ್ತ ಪರೀಕ್ಷೆ ಮಾಡಿಸಿಕೊಂಡ ತಕ್ಷಣ ವರದಿ ಬರಲ್ಲ. ತುಂಬಾ ದಿನಗಳ ಕಾಲ ಕಾಯಬೇಕಾಗಿದೆ. ಅಲ್ಲಿಯವರೆಗೂ ನಮ್ಮ ಗತಿಯೇನು ಎನ್ನುತ್ತಾರೆ. ಅಷ್ಟೇ ಅಲ್ಲ, ನಮಗೆಲ್ಲಿ ಸೋಂಕು ಬರುತ್ತದೋ ಎಂಬ ಆತಂಕ ಜನರಲ್ಲಿ ಆಳವಾಗಿ ಬೇರೂರಿದೆ. ಹೀಗಾಗಿ, ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳ ಸಂಖ್ಯೆ ವಿರಳವಾಗಿದೆ.
ಫಾಲೋ ಅಪ್ ಟ್ರೀಟ್ಮೆಂಟ್ ರೋಗಿಗಳಿಗೆ ಮತ್ತಷ್ಟು ತೊಂದರೆಯಾಗ್ತಿದೆ. ಅಂದರೆ ದೀರ್ಘ ಕಾಲದ ರೋಗಗಳಾದ ಶುಗರ್, ಬಿಪಿ, ಕೊಲೆಸ್ಟ್ರಾಲ್, ಅಸ್ತಮಾ, ಕ್ಯಾನ್ಸರ್ ರೋಗಿಗಳಿಗೆ ಮಾಡುವ ಕಿಮೋಥೆರಪಿ, ರೇಡಿಯೋ ಥೆರಪಿ ಇದೆಲ್ಲವನ್ನು ಪ್ರತಿ ತಿಂಗಳು ಮಾಡಿಸುವ ಅಗತ್ಯವಿದೆ. ಇವರೆಲ್ಲರೂ ವರದಿಗೆ ಕಾದು ಕುಳಿತರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇತ್ತ ಕಣ್ಣು, ದಂತ ಚಿಕಿತ್ಸೆ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ತುರ್ತು ರೋಗಿಗಳಿಗೆ ಚಿಕಿತ್ಸೆಗೆ ನೀಡುವಂತೆ ಸರ್ಕಾರವೂ ಆದೇಶಿಸಿದೆ. ಆದರೆ, ಅದಕ್ಕೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಹೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.