ಕರ್ನಾಟಕ

karnataka

ETV Bharat / state

ಶಾಸಕರು ಅಸಮಾಧಾನಗೊಂಡಿದ್ದರೂ ಸಿಎಂ ಯಡಿಯೂರಪ್ಪಗಿಲ್ಲ ಆತಂಕ..! - ಶಾಸಕರು ಅಸಮಾಧಾನ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಎರಡು ಡಜನ್‌ಗೂ ಹೆಚ್ಚು ಮಂದಿ ಶಾಸಕರು ಅಸಮಾಧಾನಗೊಂಡಿದ್ದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತ್ರ ಸೇಫ್‌ ಆಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ

By

Published : Aug 20, 2019, 4:17 PM IST

ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವಸ್ಥಾನ ಸಿಗದೆ ಎರಡು ಡಜನ್‌ಗೂ ಹೆಚ್ಚು ಮಂದಿ ಶಾಸಕರು ಅಸಮಾಧಾನಗೊಂಡಿದ್ದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತ್ರ ಸೇಫ್‌ ಆಗಿದ್ದಾರೆ. ಇದಕ್ಕೆ ಕಾರಣ, ಸಚಿವ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ನಿರ್ಣಾಯಕ ಪಾತ್ರ ವಹಿಸದೇ ಇರುವುದು ಮತ್ತು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡವರಿಗೆ ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಆಸರೆ ನೀಡಲು ಯಾರೂ ಇಲ್ಲದಿರುವುದು ಎನ್ನಲಾಗ್ತಿದೆ.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಂಡಾಯ ಶಾಸಕರ ಸಂಖ್ಯೆ ಕಡಿಮೆ ಇರುತ್ತಿದ್ದರೂ ಹೈಕಮಾಂಡ್‌ ಮಟ್ಟದಲ್ಲಿ ಅಂತವರಿಗೆ ಆಸರೆ ನೀಡಲು ನಾಯಕರಿದ್ದರು. ಹಿಂದೆ ಗಣಿ ರೆಡ್ಡಿಗಳ ಪಡೆ ಯಡಿಯೂರಪ್ಪ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದಾಗ ಅಂದು ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿಯಾಗಿದ್ದ ದಿ. ಸುಷ್ಮಾ ಸ್ವರಾಜ್‌ ಅವರೇ ಈ ಪಡೆಯ ಬೆನ್ನಿಗಿದ್ದರು.

ಅದೇ ರೀತಿ ಕಾಲಾನುಕಾಲಕ್ಕೆ ನಿತಿನ್‌ ಗಡ್ಕರಿ, ಅಡ್ವಾಣಿ, ರಾಜ್​ನಾಥ್‌ ಸಿಂಗ್‌, ಅರುಣ್‌ ಜೇಟ್ಲಿ ತರದ ನಾಯಕರು ಕರ್ನಾಟಕದಲ್ಲಿ ಬಂಡಾಯ ಸಾರುತ್ತಿದ್ದವರಿಗೆ ಶಕ್ತಿ ತುಂಬುತ್ತಿದ್ದರು. ಆದರೆ ಈ ಬಾರಿ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಸಾರುವ ಇಚ್ಛೆ ಕನಿಷ್ಠ ಎರಡು ಡಜನ್‌ ಶಾಸಕರಿಗೆ ಇದೆಯಾದರೂ ಅವರಿಗೆ ಹೈಕಮಾಂಡ್‌ ಮಟ್ಟದಲ್ಲಿ ಸಾಥ್‌ ನೀಡುವ ನಾಯಕರು ಯಾರೂ ಇಲ್ಲ. ಯಾಕೆಂದರೆ ಸಚಿವ ಸಂಪುಟ ವಿಸ್ತರಣೆಯ ವಿಷಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಎಂ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್​ ಸಂತೋಷ್‌ ಸೇರಿದಂತೆ ಪ್ರಭಾವಿಗಳಾಗಿರುವ ವಿವಿಧ ನಾಯಕರ ಜೊತೆ ಚರ್ಚೆ ನಡೆಸಿ ಅಂತಿಮ ಪಟ್ಟಿ ರಚಿಸಿದ್ದಾರೆ ಎನ್ನಲಾಗ್ತಿದೆ.

ಹೀಗಾಗಿ ಯಾರೇ ಬಂಡಾಯವೆದ್ದರೂ ಅತೃಪ್ತರಿಗೆ ದೊಡ್ಡ ಮಟ್ಟದಲ್ಲಿ ಸಾಥ್‌ ನೀಡುವವರು ಇಲ್ಲ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ್‌ ಕತ್ತಿ, ಗೂಳಿಹಟ್ಟಿ ಶೇಖರ್‌, ಅಪ್ಪಚ್ಚು ರಂಜನ್‌, ಅಂಗಾರ, ಎಸ್.ಆರ್.ವಿಶ್ವನಾಥ್‌, ಅಭಯ ಪಾಟೀಲ್‌, ಎ.ರಾಮದಾಸ್‌, ಕುಮಾರ್‌ ಬಂಗಾರಪ್ಪ, ಪೂರ್ಣಿಮಾ, ತಿಪ್ಪಾರೆಡ್ಡಿ ಸೇರಿದಂತೆಯಾವ ಜಿಲ್ಲೆಯಲ್ಲಿ ನೋಡಿದರೂ ಅಸಮಾಧಾನಿತ ಶಾಸಕರಿದ್ದಾರೆ. ಉಮೇಶ್‌ ಕತ್ತಿ ಕೂಡಾ ತಮ್ಮ ರಾಜಕೀಯ ಜೀವನದಲ್ಲಿ ಘೋಡಾ ಹೈ ಮೈದಾನ್‌ ಹೈ ಎಂಬಂತೆ ನಡೆದವರೇ ಹೊರತು ಬಂಡಾಯದ ಶಿಬಿರಗಳಲ್ಲಿ ಕಾಣಿಸಿಕೊಂಡವರಲ್ಲ. ಸಚಿವ ಸಂಪುಟ ರಚನೆಯಲ್ಲಿ ದೊಡ್ಡ ಪಾತ್ರ ವಹಿಸಲಾಗದ ಅಸಹಾಯಕತೆ ಇದ್ದರೂ ಹೈಕಮಾಂಡ್‌ ಬಲಿಷ್ಠವಾಗಿರುವ ಕಾರಣದಿಂದ ಯಡಿಯೂರಪ್ಪ ಸೇಫ್‌ ಆಗಿದ್ದಾರೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details