ಬೆಂಗಳೂರು :ಡ್ರಗ್ಸ್ ವಿರುದ್ಧ ಸರ್ಕಾರ ಸಮರ ಸಾರಿದ ಬೆನ್ನಲ್ಲೇ ಆನ್‌ಲೈನ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಕಡಿವಾಣ ಹಾಕಬೇಕಿದೆ. ದೊಡ್ಡ ಮೊತ್ತದ ಆಕರ್ಷಕ ನಗದು ಬಹುಮಾನಕ್ಕೆ ಒಲವು ತೋರುತ್ತಿರುವ ಯುವ ಸಮೂಹ, ಕಡಿಮೆ ಮೊತ್ತ ಹೂಡಿ ಹೆಚ್ಚು ಹಣ ಸಂಪಾದನೆ ಮಾಡುವ ಉಮೇದಿನಲ್ಲಿ ಕೈಸುಟ್ಟು ಕೊಳ್ಳುತ್ತಿದ್ದಾರೆ.
ದೇಶದಲ್ಲಿ ಆನ್‌ಲೈನ್ ಗೇಮಿಂಗ್ ವ್ಯವಹಾರ ₹20 ಕೋಟಿ ದಾಟಿರುವ ಬಗ್ಗೆ ವರದಿಯಾಗಿದೆ. ಲಾಕ್ಡೌನ್ ಅವಧಿಯಲ್ಲಿ ಹೆಚ್ಚೆಚ್ಚು ಹೊಸ ಗ್ರಾಹಕರು ಇದರ ಬಲೆಗೆ ಬಿದ್ದಿದ್ದಾರೆ. ಈ ಬಗ್ಗೆ ಆನ್‌ಲೈನ್ ಗೇಮಿಂಗ್ ಸಂಸ್ಥೆ ಮಾಹಿತಿ ನೀಡಿದೆ. ರಮ್ಮಿ ಸರ್ಕಲ್, ಡ್ರೀಮ್ 11, ಟಾಕ್ಸಲ್. ಎಂ11 ಸರ್ಕಲ್, ಗೇಮ್ ಜಿ, ಮಿಲಿಯನ್ ಫೇಸ್ಟ್ , ಬ್ಲಿಟ್ಜ್ ಪ್ರೀಮಿಯರ್ ಲೀಗ್, ಪೋಕರಿ ಬಾಜಿ, ರಮ್ಮಿ ಬಾಜಿ, ರಮ್ಮಿ ಗುರು, ಜಂಗ್ಲಿ ರಮ್ಮಿ, ರಮ್ಮಿ ಕಲ್ಚರ್, ಮೈ ಟಿಂ 11 ಸರ್ಕಲ್, ಹವ್ ಜಾತ್, ಫ್ಯಾನ್ಫೈಟ್, ಪೇಟಿಎಂ, ಫಸ್ಟ್ ಗೇಂ ಸೇರಿದಂತೆ ಇನ್ನಿತರೆ 100ಕ್ಕೂ ಹೆಚ್ಚು ಆನ್‌ಲೈನ್ ಗೇಮ್ಗಳಿವೆ.
ಬಹುತೇಕ ಈ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿಲ್ಲ. ಗೂಗಲ್ನಲ್ಲಿ ಹುಡುಕಾಡಿ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಲ್ಲದೆ ಆ್ಯಪ್ಗಳ ಲಿಂಕ್ನ ಯ್ಯೂಟೂಬ್, ಫೇಸ್ಬುಕ್, ಟೆಲಿಗ್ರಾಂಗಳಲ್ಲಿ ಸಿಗಲಿದ್ದು, ಬಳಕೆದಾರರನ್ನ ಹೆಚ್ಚಿಸಲು ಇಂತಹ ಲಿಂಕ್ಗಳನ್ನ ಹಾಕಲಾಗುತ್ತಿದೆ. ಡೌನ್‌ಲೋಡ್ ಮಾಡಿಕೊಂಡವರಿಗೆ 100 ರೂ. ಕ್ಯಾಶ್‌ಬ್ಯಾಕ್ ನೀಡಿ ಕಂಪನಿಗಳು ಆಕರ್ಷಣೆ ಮಾಡುತ್ತಿವೆ.