ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳು ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರನ್ನ ಸಂಪರ್ಕಿಸಿ, ಕಡಿಮೆ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರು ಜನ ಆರೋಪಿಗಳನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಮನೋಜ್, ಫಣೀಂದ್ರ, ಚಕ್ರಧರ್, ಶ್ರೀನಿವಾಸ್, ಸೋಮಶೇಖರ್ ಹಾಗೂ ವಸಂತ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರು ಸೃಷ್ಟಿಸಿದ್ದ 84 ಬ್ಯಾಂಕ್ ಖಾತೆಗಳಲ್ಲಿ 854 ಕೋಟಿ ಹಣ ವಹಿವಾಟು ಆಗಿದ್ದು, ಸದ್ಯ ಬ್ಯಾಂಕ್ ಖಾತೆಗಳಿಂದ 5 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ.
ಟೆಲಿಗ್ರಾಂ, ವಾಟ್ಸ್ಯಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಕಡಿಮೆ ಹಣ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯುವ ವಿವಿಧ ಇನ್‌ಸ್ಟಾಲ್ಮೆಂಟ್ ಆಫರ್ ನೀಡುತ್ತಿದ್ದರು. ಆದರೆ ಹಣ ಹೂಡಿಕೆ ಮಾಡಿದವರಿಗೆ ಯಾವುದೇ ಲಾಭಾಂಶ ನೀಡದೆ ವಂಚಿಸುತ್ತಿದ್ದರು. ಇದೇ ರೀತಿ ಮೋಸ ಹೋಗಿರುವುದರ ಕುರಿತು ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ 2, ಆಗ್ನೇಯ ವಿಭಾಗದಲ್ಲಿ 3, ಈಶಾನ್ಯ ವಿಭಾಗದಲ್ಲಿ 4 ಹಾಗೂ ಉತ್ತರ ವಿಭಾಗದಲ್ಲಿ 8 ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಆರೋಪಿಗಳು ತಮಿಳುನಾಡಿನಲ್ಲಿನ ಬ್ಯಾಂಕ್ ಖಾತೆಯಿಂದ ಬೆಂಗಳೂರಿನ ಸುಬ್ಬು ಎಂಟರ್ಪ್ರೈಸೆಸ್ ಎಂಬ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ತಿಳಿದು ಬಂದಿತ್ತು. ಆದರೆ ಸುಬ್ಬು ಎಂಟರ್ಪ್ರೈಸಸ್ ಖಾತೆಯ ಮಾಲೀಕರನ್ನು ವಿಚಾರಿಸಿದಾಗ ಅವರಿಗೆ ಅರಿವಿಲ್ಲದೆ ಅವರ ಸ್ನೇಹಿತನಾದ ಆರೋಪಿ ವಸಂತ್ ಕುಮಾರ್ ದಾಖಲಾತಿಗಳನ್ನು ಪಡೆದುಕೊಂಡು ಬ್ಯಾಂಕ್ ಖಾತೆ ತೆರೆದಿರುವುದು ಪತ್ತೆಯಾಗಿತ್ತು.
ಮತ್ತಷ್ಟು ವಿಚಾರಣೆ ನಡೆಸಿದಾಗ ಇದೇ ರೀತಿ ಆರೋಪಿಗಳು ಅಮಾಯಕರಿಂದ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಪಡೆದುಕೊಂಡು ಅದೇ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸುತ್ತಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತರು ಕೃತ್ಯಕ್ಕೆ ಬಳಸುತ್ತಿದ್ದ 84 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ 5 ಕೋಟಿ ರೂ. ಹಣ, ವಿವಿಧ ಕಂಪನಿಗಳ 13 ಮೊಬೈಲ್ ಫೋನ್, 7 ಲ್ಯಾಪ್‌ಟಾಪ್‌ಗಳು, 1 ಪ್ರಿಂಟರ್, 1 ಸ್ವೈಪಿಂಗ್ ಮಷಿನ್, 1 ಹಾರ್ಡ್ ಡಿಸ್ಕ್, ಪಾಸ್‌ಬುಕ್ಸ್ ಮತ್ತಿತರ ದಾಖಲಾತಿಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾರತದಾದ್ಯಂತ 5013 ಸೈಬರ್ ಕ್ರೈಂ ಪ್ರಕರಣಗಳು:ಈ ರೀತಿ ದೇಶಾದ್ಯಂತ 5013 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಅಂಡಮಾನ್ & ನಿಕೋಬಾರ್ - 01, ಆಂಧ್ರಪ್ರದೇಶ - 296, ಅರುಣಾಚಲ ಪ್ರದೇಶ - 01, ಅಸ್ಸಾಂ - 23, ಬಿಹಾರ - 200, ಚಂಡೀಗಡ - 13, ಛತ್ತೀಸ್ಗಢ - 70, ದೆಹಲಿ - 194, ಗೋವಾ - 08, ಗುಜರಾತ್ - 642, ಹರಿಯಾಣ - 201, ಹಿಮಾಚಲ ಪ್ರದೇಶ - 39, ಜಾರ್ಖಂಡ್ - 42, ಕರ್ನಾಟಕ - 487, ಕೇರಳ - 138, ಲಕ್ಷದ್ವೀಪ - 01, ಮಧ್ಯಪ್ರದೇಶ - 89, ಮಹಾರಾಷ್ಟ್ರ - 332, ಮೇಘಾಲಯ - 04, ಮಿಜೋರಾಂ - 01, ಒಡಿಶಾ - 31, ಪುದುಚೇರಿ - 20, ಪಂಜಾಬ್ - 67, ರಾಜಸ್ಥಾನ -270, ತಮಿಳುನಾಡು - 472, ತೆಲಂಗಾಣ - 719, ತ್ರಿಪುರಾ - 05, ಉತ್ತರ ಪ್ರದೇಶ - 505, ಉತ್ತರಾಖಂಡ - 24, ಪಶ್ಚಿಮ ಬಂಗಾಳ - 118 ಸೇರಿ ಒಟ್ಟು 5013 ದೂರುಗಳು ದಾಖಲಾಗಿವೆ.
ಇದನ್ನೂ ಓದಿ:ದುಬೈನಲ್ಲಿ ಉದ್ಯೋಗ ವಂಚನೆ: ಐವರು ಯುವಕರಿಂದ ಸಹಾಯಕ್ಕಾಗಿ ಮನವಿ