ಕರ್ನಾಟಕ

karnataka

ETV Bharat / state

ಆನ್​​ಲೈನ್ ತರಗತಿ ನಿಷೇಧ: ಸರ್ಕಾರದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್ - High Court extends injunction order

ಸದ್ಯ ಕೋವಿಡ್ ಸೋಂಕಿನ ತೀವ್ರತೆ ತಗ್ಗಿದ್ದು, ಶಾಲೆಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಧನಾತ್ಮಕ ನಿರ್ಧಾರ ಕೈಗೊಳ್ಳುವ ಹಂತದಲ್ಲಿದೆ. ಹೀಗಾಗಿ, ಶಾಲೆಗಳನ್ನು ಪುನಾರಂಭಿಸುವ ನಿರ್ಧಾರ ಕೈಗೊಳ್ಳುವವರೆಗೆ ಅಥವಾ ಆನ್​​ಲೈನ್ ತರಗತಿ ಜಾರಿಗೆ ಸೂಕ್ತ ನೀತಿ ನಿರ್ಣಯ ರೂಪಿಸುವವರಗೆ ಜು.8ರ ಮಧ್ಯಂತರ ತಡೆಯಾಜ್ಞೆ ಆದೇಶ ಮುಂದುವರೆಯಲಿದೆ ಎಂದು ಹೈಕೋರ್ಟ್ ಹೇಳಿದೆ.

High Court
ಹೈಕೋರ್ಟ್

By

Published : Jul 22, 2021, 7:34 PM IST

ಬೆಂಗಳೂರು: ರಾಜ್ಯದಲ್ಲಿ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿರುವ ಹೈಕೋರ್ಟ್, ಶಾಲೆಗಳು ಪುನಾರಂಭಗೊಳ್ಳುವರೆಗೆ ಅಥವಾ ಸರ್ಕಾರ ಆನ್​ಲೈನ್ ತರಗತಿ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸುವವರೆಗೂ ಆನ್​ಲೈನ್ ಶಿಕ್ಷಣ ಮುಂದುವರೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಆನ್​ಲೈನ್ ತರಗತಿಗಳನ್ನು ರದ್ದುಪಡಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳು ಹಾಗು ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ತಡೆಯಾಜ್ಞೆ ಆದೇಶವನ್ನು ವಿಸ್ತರಿಸಿದೆ.

ಎಲ್‌ ಕೆಜಿಯಿಂದ 5ನೇ ತರಗತಿವರೆಗೆ ಆನ್​ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ 2020ರ ಜೂ.15ರಂದು ಆದೇಶಿಸಿತ್ತು. ಜತೆಗೆ, ಜೂ.27ರಂದು ಮತ್ತೊಂದು ಆದೇಶ ಹೊರಡಿಸಿ, ಎಲ್​ಕೆಜಿ, ಯುಕೆಜಿ ಹಾಗೂ 1ರಿಂದ 10ನೇ ತರಗತಿವರೆಗೆ ಆನ್​ಲೈನ್ ತರಗತಿ ನಡೆಸಲು ಕೆಲವು ನಿಬಂಧನೆಗಳನ್ನು ವಿಧಿಸಿತ್ತು. ಈ ಕ್ರಮ ಪ್ರಶ್ನಿಸಿ ಖಾಸಗಿ ಶಾಲೆಗಳು ಹಾಗೂ ಪೋಷಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, 10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನ್ಯಾಯಾಲಯ 2020ರ ಜು.8ರಂದು ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಅದು ಇನ್ನೂ ಚಾಲ್ತಿಯಲ್ಲಿದೆ. ಸದ್ಯ ಕೋವಿಡ್ ಸೋಂಕಿನ ತೀವ್ರತೆ ತಗ್ಗಿದ್ದು, ಶಾಲೆಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಧನಾತ್ಮಕ ನಿರ್ಧಾರ ಕೈಗೊಳ್ಳುವ ಹಂತದಲ್ಲಿದೆ. ಹೀಗಾಗಿ, ಶಾಲೆಗಳನ್ನು ಪುನಾರಂಭಿಸುವ ನಿರ್ಧಾರ ಕೈಗೊಳ್ಳುವವರೆಗೆ ಅಥವಾ ಆನ್​​ಲೈನ್ ತರಗತಿ ಜಾರಿಗೆ ಸೂಕ್ತ ನೀತಿ ನಿರ್ಣಯ ರೂಪಿಸುವವರಗೆ ಜು.8ರ ಮಧ್ಯಂತರ ತಡೆಯಾಜ್ಞೆ ಆದೇಶ ಮುಂದುವರೆಯಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ

ಶಾಲಾ ಶುಲ್ಕ ವಿವಾದ ಆ.2ಕ್ಕೆ:

ಶೇ.30ರಷ್ಟು ಶಾಲಾ ಶುಲ್ಕ ಕಡಿತಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿರುವ ಅರ್ಜಿ ಇಂದು ನ್ಯಾ. ಸಚಿನ್ ಶಂಕರ್ ಮಗದಂ ಅವರ ಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿತ್ತು. ಆದರೆ, ಸಮಯದ ಕೊರತೆಯಿಂದಾಗಿ ಅರ್ಜಿ ವಿಚಾರಣೆಯನ್ನು ಆ.2ಕ್ಕೆ ಮುಂದೂಡಿದೆ. ಶುಲ್ಕ ವಿವಾದವನ್ನು ಬಗೆಹರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಯ ಕುರಿತು ಅಂದು ವಿಚಾರಣೆ ನಡೆಯಲಿದೆ.

ABOUT THE AUTHOR

...view details