ಬೆಂಗಳೂರು:ಕೊರೊನಾ ಮೊದಲ ಹಾಗೂ ಎರಡನೇ ಅಲೆಯ ಭೀತಿಯ ಬಳಿಕ, ಇದೀಗ ಮೂರನೇ ಅಲೆ ಎದುರಿಸಲು ಸಜ್ಜಾಗಬೇಕಿದೆ. ಕೊರೊನಾ ಎರಡು ಅಲೆಗಳ ಹೊಡೆತದ ಬಳಿಕ ಭಾಗಶಃ ಕ್ಷೇತ್ರಗಳು ನಿಧಾನಗತಿಯಲ್ಲಿ ಚೇತರಿಕೆ ಕಂಡಿದ್ದರೆ, ಇತ್ತ ಶೈಕ್ಷಣಿಕ ವರ್ಷಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ಕೋವಿಡ್ ಕಾರಣಕ್ಕೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಭೌತಿಕ ತರಗತಿಗೆ ಸರ್ಕಾರ ಹಾಗೂ ಇಲಾಖೆ ಬ್ರೇಕ್ ಹಾಕಿದೆ. ಕಲಿಕೆಯ ದೃಷ್ಟಿಯಿಂದ ಮಕ್ಕಳಿಗೆ ಆನ್ಲೈನ್ ಕ್ಲಾಸ್ನಲ್ಲೇ ಪಾಠ-ಪ್ರವಚನ ಮುಂದುವರೆಸಲಾಗುತ್ತಿದೆ. ಆದರೆ, ಇದೀಗ ಆನ್ಲೈನ್ ಅಕ್ಷರ ಅಭ್ಯಾಸವೇ ಮಕ್ಕಳ ಕಣ್ಣಿಗೆ ಆಪತ್ತು ತರುವಂತೆ ಮಾಡಿದೆ.
ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಕೊರೊನಾ ಶಾಲೆಯಲ್ಲಿ ಆಟ - ಪಾಠ ಅಂತ ಓದಿಕೊಂಡು ಇದ್ದ ಮಕ್ಕಳ ಕಲಿಕೆಗೆ ಅಡ್ಡಗಾಲು ಹಾಕಿದೆ. ಕೊರೊನಾ ಹರಡಬಾರದು ಅಂತ ಮಕ್ಕಳನ್ನ ಶಾಲೆಗೂ ಕಳುಹಿಸದೇ ಮನೆಯಲ್ಲಿ ಲಾಕ್ ಮಾಡಲು ಹೋದರೆ, ಇತ್ತ ಅವರಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಈ ಕುರಿತು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. ಕೊರೊನಾ ಶುರುವಾದ ದಿನದಿಂದಲೂ ಹಿರಿಯರು-ಕಿರಿಯರು ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ಮನರಂಜನೆಗಾಗಿ ಟಿವಿ ನೋಡುವುದು ಹಾಗೂ ಕೆಲಸಕ್ಕಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್ ಜೊತೆಗೆ ಆನ್ಲೈನ್ ಕ್ಲಾಸ್ಗಾಗಿ ಮೊಬೈಲ್ ಫೋನ್ಗೆ ಮಕ್ಕಳು ಹೆಚ್ಚು ಸಮಯ ನೀಡುತ್ತಿದ್ದಾರೆ. ಹೀಗಾಗಿ, ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಕೇಸ್ಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ಕಣ್ಣಿಗಾಗುವ ತೊಂದರೆಗಳೇನು?:ಕಣ್ಣಿನ ಶುಷ್ಕತೆ (dryness) ಹೆಚ್ಚಾಗುತ್ತಿರುವುದು, ಅಲರ್ಜಿಯಾಗುವುದು, ನವೆಯಾಗುವುದು ಸೇರಿದಂತೆ ದೂರದೃಷ್ಟಿ ಸಮಸ್ಯೆ ಇರುವುದಾಗಿ ಪೋಷಕರು ತಮ್ಮ ಮಕ್ಕಳನ್ನ ಆಸ್ಪತ್ರೆಗೆ ಕರೆತರುತ್ತಿದ್ದಾರೆ ಎಂದು ಡಾ.ಸುಜಾತಾ ರಾಥೋಡ್ ವಿವರಿಸಿದರು.
ಡಾ.ಸುಜಾತಾರ ಕೆಲವು ಟಿಪ್ಸ್ :ಕಲಿಕೆಯಿಂದ ಮಕ್ಕಳಿಗೆ, ಕೆಲಸದಿಂದ ದೊಡ್ಡವರಿಗೆ ಸ್ಕ್ರೀನಿಂಗ್ ಅನಿವಾರ್ಯ. ಇನ್ನು ಕೊರೊನಾ ಇರುವ ಕಾರಣಕ್ಕೆ ಇಂದಿಗೂ ಶಾಲಾ - ಕಾಲೇಜು ಆರಂಭವಾಗಿಲ್ಲ. ಹೀಗಾಗಿ ಕಲಿಕೆ ದೃಷ್ಟಿಯಿಂದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅನಿರ್ವಾಯ. ಇತ್ತ ಬಹಳಷ್ಟು ಮಂದಿಗೆ ವರ್ಕ್ ಫ್ರಾಂ ಹೋಂ ವ್ಯವಸ್ಥೆ ಇರುವುದರಿಂದ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಕೆ ಮಾಡಲೇಬೇಕು. ಈ ರೀತಿ ಅನಿರ್ವಾಯಕ್ಕೆ ಸಿಲುಕಿ ಕಣ್ಣಿನ ರಕ್ಷಣೆ ಹೇಗೆಪ್ಪಾ ಮಾಡುವುದು ಅನ್ನೋರಿಗೂ ಡಾ.ಸುಜಾತಾ ಕೆಲವು ಟಿಪ್ಸ್ ನೀಡಿದ್ದಾರೆ.
ಸ್ಕ್ರೀನ್ ಟೈಂ ಬ್ರೇಕ್ ಮಾಡಬೇಕು ಅಂದರೆ ಪ್ರತಿ 20 ನಿಮಿಷಕ್ಕೆ 20 ಸೆಕೆಂಡ್ನಷ್ಟು ಬ್ರೇಕ್ ತೆಗೆದುಕೊಂಡು 20 ಫೀಟ್ ದೂರದ ವಸ್ತುಗಳನ್ನ ಅಥವಾ ಹಸಿರು ಪ್ರದೇಶವನ್ನ ನೋಡಬೇಕು. ಇದನ್ನ ನಮ್ಮಲ್ಲಿ 20 - 20 - 20 ವ್ಯಾಯಾಮ ಅಂತ ಹೇಳುತ್ತೇವೆ. ಹೀಗೆ ದೂರ ನೋಡುವಾಗ ಕಣ್ಣಿನ ರೆಪ್ಪೆಗಳನ್ನ ಮಿಣುಕಿಸಬೇಕು. ಹಾಗೇ ಪೌಷ್ಟಿಕ ಆಹಾರ ಸೇವಿಸುವುದರಿಂದ ಕಣ್ಣಿನ ಆರೈಕೆಯು ಸಾಧ್ಯವಾಗುತ್ತೆ ಎಂದು ತಿಳಿಸಿದರು.