ಬೆಂಗಳೂರು : ಬಗರ್‌ಹುಕುಂ ಭೂಮಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2022 ಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಆರ್. ಅಶೋಕ್, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ದಿನಾಂಕ 1-1-2005 ರ ಹಿಂದಿನಿಂದ ಸಾಗುವಳಿ ಮಾಡಲಾಗುತ್ತಿರುವ 17-3-2018 ರಿಂದ 16-3-2019 ರವರೆಗೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-57 ನ್ನು ಸಲ್ಲಿಸುವುದಕ್ಕೆ ಒಂದು ವರ್ಷ ಕಾಲಾವಕಾಶ ನೀಡುವ ಸಲುವಾಗಿ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸತ್ತಿನ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಕಾರಣ 10-3-2019 ರಿಂದ ಅರ್ಜಿಗಳನ್ನು ಸ್ವೀಕರಿಸಿರುವುದಿಲ್ಲ ಮತ್ತು ಶಾಸಕರು ಹಾಗೂ ಸಾರ್ವಜನಿಕರಿಂದ ಈ ಬಗ್ಗೆ ಹಲವು ಮನವಿಗಳು ಸ್ವೀಕೃತಗೊಂಡಿವೆ. ಹಾಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ-1964 ರ 94 ಎ ಪ್ರಕರಣವನ್ನು ತಿದ್ದುಪಡಿ ಮಾಡುವುದರ ಮೂಲಕ ನಮೂನೆ-57 ನ್ನು ಸಲ್ಲಿಸುವುದಕ್ಕಾಗಿ ಸಮಯ ವಿಸ್ತರಿಸಲು ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ಅವಶ್ಯವೆಂದು ಪರಿಗಣಿಸಿ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.