ಬೆಂಗಳೂರು: ರಾಜ್ಯದ ಶೈಕ್ಷಣಿಕ ವರ್ಷವನ್ನೇ ಅದಲು ಬದಲು ಮಾಡಿದ ವರ್ಷ ಅಂದರೆ ಅದು 2020. ಕೋವಿಡ್ ಕಾರಣಕ್ಕೆ ಶಾಲಾ-ಕಾಲೇಜುಗಳ ಬಾಗಿಲಿಗೆ ಬೀಗ ಹಾಕಲಾಯಿತು. ಭಾಗಶಃ ಶೈಕ್ಷಣಿಕ ವರ್ಷದ ಪಾಠ ಪ್ರವಚನ ಆನ್ಲೈನ್ನಲ್ಲೇ ನಡೆದು ಹೋಯ್ತು. ಸಾಮಾನ್ಯ ವರ್ಷಕ್ಕಿಂತ ಈ ವರ್ಷ ಕೋವಿಡ್ ಕಾರಣಕ್ಕೆ ಮುಖ್ಯ ಪರೀಕ್ಷೆಗಳಾದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ, ಸಿಇಟಿ ಪರೀಕ್ಷೆಯು ಶುಚಿತ್ವದ ರಕ್ಷಣೆಯಲ್ಲಿ ನಡೆಯಿತು.
ಈ ನಡುವೆ ಶುಲ್ಕ ವಿಚಾರ, ಆನ್ ಲೈನ್ ಕ್ಲಾಸ್ ತಕರಾರು, ಶಾಲೆ ಆರಂಭದ ಚಿಂತನೆ, ಬೀದಿಗೆ ಬಿದ್ದ ಶಿಕ್ಷಕರು, ವೇತನಕ್ಕಾಗಿ ಹೋರಾಟ, ವಿದ್ಯಾಗಮ ಶುರು ಮಾಡಿದ್ದು ಮಧ್ಯೆ ನಿಂತಿದ್ದು ಹೀಗೆ ಹತ್ತಾರು ಸಿಹಿ-ಕಹಿ ವಿಚಾರಗಳಿಗೆ ಸಾಕ್ಷಿಯಾಗಿದ್ದು 2020ನೇ ವರ್ಷ.
ಶೈಕ್ಷಣಿಕ ವರ್ಷದಲ್ಲಿ ಆದ ಆಗುಹೋಗುಗಳು
ವರ್ಷದ ಆರಂಭದಲ್ಲೇ ಸರ್ಕಾರಕ್ಕೆ ಎದುರಾಗಿದ್ದು, ಶಾಲಾ ಕಾಲೇಜು ನೌಕರರ ಮುಷ್ಕರ. ರಕ್ತ ಕೊಟ್ಟೆವು- ಪಿಂಚಣಿ ಬಿಡೆವು ಅಂತ ಮತ್ತೊಮ್ಮೆ ಅನುದಾನಿತ ಶಾಲಾ- ಕಾಲೇಜು ನೌಕರರು ಬೀದಿಗಿಳಿದರು. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಧ್ಯೆ ಸೋಶಿಯಲ್ ಮೀಡಿಯಾ ವಾರ್ ನಡೆಯಿತು. ಮೆಡಿಕಲ್ ಸೀಟ್ ಬ್ಲಾಕಿಂಗ್ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಅಕ್ರಮದ ಬಗ್ಗೆ ದಾಖಲೆಗಳಿದ್ದರೆ ಕೊಡಲಿ ಅಂತ ಸುಧಾಕರ್ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು.
ಓದುಗರಿಗೆ ದೇಶದಲ್ಲೇ ಮೊದಲ ಡಿಜಿಟಲ್ ಗ್ರಂಥಾಲಯ ಆ್ಯಪ್ ಬಿಡುಗಡೆ ಮಾಡಿದಕ್ಕೆ ಈ ವರ್ಷ ಸಾಕ್ಷಿಯಾಯ್ತು. ಕೋವಿಡ್ ಹಿನ್ನೆಲೆ ಶಾಲಾ-ಕಾಲೇಜು ಆರಂಭವಾಗದ ಕಾರಣ ಆನ್ಲೈನ್ ಮೂಲಕ ಪಾಠ ಪ್ರವಚನ ನಡೆಯುತ್ತಿತ್ತು. ಆದರೆ ಶುಲ್ಕ ಯಾಕೆ? ಅಂತಲೂ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಗರಂ ಆಗಿತ್ತು. ಲಾಕ್ಡೌನ್ ಅವಧಿ ವಿಸ್ತರಣೆ ಹಿನ್ನೆಲೆ ಸಾಕಷ್ಟು ಸಲ ಪರೀಕ್ಷೆಗಳು ಮುಂದೂಡಲಾಗಿತ್ತು.
ಪುನರ್ಮನನ ತರಗತಿ ದೂರದರ್ಶನದಲ್ಲಿ ವೀಕ್ಷಣೆ
ಕೋವಿಡ್ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಪೋಷಕರು ಸಿಲುಕಿದ್ದರು. ಹೀಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಅಂತ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದರು. ಶಾಲೆಗಳು ಆರಂಭವಾಗದ ಕಾರಣಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಪುನರ್ಮನನ ತರಗತಿಯನ್ನ ದೂರದರ್ಶನ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.
ಕಂಟೈನ್ಮೆಂಟ್ ಏರಿಯಾದಲ್ಲಿ ವಾಸವಿರುವ ಬೆಂಗಳೂರು ವಿವಿ ಶಿಕ್ಷಕರಿಗೆ ಕಚೇರಿಗೆ ಹಾಜರಾಗಲು ವಿನಾಯಿತಿ ನೀಡಲಾಗಿತ್ತು. ಆದರೆ ಇತರರು ಕಡ್ಡಾಯವಾಗಿ ಹಾಜರಾಗಬೇಕಿತ್ತು. 'ನೋ ಸ್ಕೂಲ್ಸ್' ಅಭಿಯಾನಕ್ಕೂ ಸಾಕ್ಷಿಯಾಗಿದ್ದು ಇದೇ ವರ್ಷ. ಕೊರೊನಾ ಜೀರೋ ಬರೋವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಅಂತ ಪೋಷಕರು ಅಭಿಯಾನವನ್ನೇ ಮಾಡಿದರು.
ಸೇತುಬಂಧ ತರಗತಿಗಳ ಆರಂಭ
ಎಲ್ಕೆಜಿ- ಯುಜಿಕೆ, ಪ್ರಾಥಮಿಕ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನಡೆಸುವಂತಿಲ್ಲ ಅಂತ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದರು. ಕೋವಿಡ್ ನಡುವೆಯೂ ಪೋಷಕರ ಅನುಮತಿ ಪಡೆದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೇತುಬಂಧ ತರಗತಿಗಳ ಆರಂಭವಾದವು.