ಬೆಂಗಳೂರು :ನೋವೆಲ್ ಕೊರೊನಾ ವೈರಸ್ ಕಾಲಿಟ್ಟು ವರ್ಷಗಳು ಕಳೆದು ಹೋಯ್ತು. ಆದರೆ, ಕೊರೊನಾ ವೈರಸ್ಗೆ ಇಂದಿಗೂ ಯಾವುದೇ ಪ್ರತ್ಯೇಕ ಔಷಧಿ ಕಂಡು ಹಿಡಿದಿಲ್ಲ. ಬದಲಿಗೆ ಸೋಂಕಿತನ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ.
ಅಂದಹಾಗೇ, ಕೊರೊನಾದಿಂದಾಗುವ ತೀವ್ರತೆಯನ್ನ ಕಡಿಮೆ ಮಾಡಲು ಬಂದಿದ್ದೆ ಕೋವಿಡ್ ಲಸಿಕೆ. 2ನೇ ಅಲೆಯ ಆರ್ಭಟದ ಮಧ್ಯೆ ರಾಮಬಾಣವಾಗಿ ಬಂದಿದ್ದು ಕೋವಿಡ್ ವ್ಯಾಕ್ಸಿನ್. ಮೊದ್ ಮೊದಲು ಲಸಿಕೆ ಕುರಿತು ಜನರುಅನುಮಾನಿಸಿದ್ದರು. ನಂತರದ ದಿನಗಳಲ್ಲಿ ಜನ ಲಸಿಕೆ ಪಡೆಯಲು ಮುಗಿಬಿದ್ದಾಗ ಕೊರತೆಯ ಸ್ಥಿತಿ ನಿರ್ಮಾಣವಾಯ್ತು.
2021ರ ಜನವರಿ 16ರಂದು ದೇಶದ್ಯಾಂತ ದೊಡ್ಡ ಲಸಿಕಾ ಅಭಿಯಾನವೇ ಶುರುವಾಯ್ತು. ಕೊರೊನಾ ಲಸಿಕೆ ವಿತರಣೆಗೂ ಮುನ್ನ ಎಲ್ಲಾ ಜಿಲ್ಲೆಗಳಿಗೂ ಸಿರಿಂಜುಗಳ ವಿತರಣೆ ಕಾರ್ಯ ಆರಂಭಿಸಿದ ಸರ್ಕಾರ, ಜನವರಿ 8ರಂದು ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಿತು. ಇದರಲ್ಲಿ ಯಶಸ್ವಿಯಾಗಿ ಜನವರಿ 16ರಂದು ಲಸೀಕರಣಕ್ಕೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಆಗಿನ ಸಿಎಂ ಆಗಿದ್ದ ಯಡಿಯೂರಪ್ಪ ಚಾಲನೆ ನೀಡಿದ್ದರು.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಸುಧಾಕರ್, ಒಂದು ವರ್ಷದ ಹಿಂದೆ ಈ ದಿನದಂದು ಶತಕೋಟಿ ಭಾರತೀಯರನ್ನು ಸಾಂಕ್ರಾಮಿಕದಿಂದ ರಕ್ಷಿಸಲು ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಳೆದ 365 ದಿನಗಳಲ್ಲಿ ಕರ್ನಾಟಕದಲ್ಲಿ ಒಟ್ಟು 9.14 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ. ಸರಾಸರಿ ಪ್ರತಿ ದಿನ 2.5 ಲಕ್ಷ ಡೋಸ್ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.