ಬೆಂಗಳೂರು:ಕೋವಿಡ್-19ನಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಕೋವಿಡ್ ಸಂಕಷ್ಟ ಬರದೇ ಇದ್ದಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಆ ನೋವು ನನಗಿದೆ ಎಂದು ಸಿಎಂ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, ಕೋವಿಡ್ ಅಭಿವೃದ್ಧಿ ಕೆಲಸಕ್ಕೆ ಕಂಟಕವಾಗಿರುವ ನೋವು ನನಗೆ ಇದೆ. ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಕೋವಿಡ್ ಇಲ್ಲದಿದ್ದರೆ ಅತಿ ವೇಗದ ಅಭಿವೃದ್ಧಿ ಸಾಧಿಸಬಹುದಿತ್ತು. ಲಾಕ್‌ಡೌನ್ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಇನ್ನು ಮುಂದೆ ಲಾಕ್‌ಡೌನ್ ಬಗ್ಗೆ ಚರ್ಚೆ ಮಾಡದೇ ಕೋವಿಡ್ ಜೊತೆ ಜೀವನ ನಡೆಸಬೇಕಾಗಿದೆ. ಸಂಪನ್ಮೂಲ ಕ್ರೋಢೀಕರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ರಾಜ್ಯದ ಜನರ ಋಣ ತೀರಿಸಬೇಕಾಗಿದೆ. ಇನ್ನೂ ಆಗಬೇಕಾಗಿದ್ದು ಬಹಳಷ್ಟಿದೆ. ಈ ನಾಡಿನ ಜನರು, ರೈತ, ಕೃಷಿ ಕಾರ್ಮಿಕ, ದೀನದಲಿತರು, ಬಡವರ ಏಳಿಗೆಗೆ ಪ್ರಯತ್ನಿಸೋಣ. ಆರ್ಥಿಕ ಸೋರಿಕೆಗೆ ಕಡಿವಾಣ ಹಾಕಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸೋಣ. ಉಳಿದ ಅವಧಿಯಲ್ಲಿ ನಿಮ್ಮ ಸಹಕಾರದಿಂದ ಸುಭದ್ರ ಸರ್ಕಾರ ನೀಡಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ. ಅದಕ್ಕೆ ನಾನು ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.
ಬರಗಾಲದ ಸಂದರ್ಭ ಅಧಿಕಾರಕ್ಕೆ ಬಂದೆ. ಆದರೆ ಕೆಲವೇ ದಿನಗಳಲ್ಲಿ ಉತ್ತಮ ಮಳೆ ಆಯಿತು. ಅತಿವೃಷ್ಟಿಯಿಂದ ಉಂಟಾದ ಅಪಾರ ಹಾನಿಯಾಯಿತು. ಅದು ನನಗೆ ಅಗ್ನಿಪರೀಕ್ಷೆಯಾಗಿತ್ತು. ಆಗ ನಾನು ಒಬ್ಬನೇ ಇದ್ದೆ. ಸಂಪುಟ ಸಚಿವರು ಇರಲಿಲ್ಲ. ಒಬ್ಬಂಟಿಯಾಗಿ ಪ್ರವಾಸ ಮಾಡಿ ಜನರ ಸಂಕಷ್ಟ ಆಲಿಸಿದೆ. ಅವರ ಕಷ್ಟ ನೀಗಿಸಲು ಯತ್ನಿಸಿದೆ ಎಂದು ಸ್ಮರಿಸಿದರು.
ನನ್ನ ಆಡಳಿತಾವಧಿಯಲ್ಲಿ ರೈತ, ಆತನ ಕುಟುಂಬ ನೆಮ್ಮದಿಯಿಂದ ಬದುಕಬೇಕು ಎಂಬುದು ನಮ್ಮ ಆಶಯ. ಪರಿಶಿಷ್ಟ ಪಂಗಡದ ಮನೆಗೆ ಹೋಗಿ ಅವರ ಸಂಕಷ್ಟ ನೀಗಿಸುವ ಕೆಲಸ ಮಾಡಿದೆವು. ಅವರು ನೆಮ್ಮದಿಯಿಂದ ಜೀವನ ನಡೆಸಬೇಕು. ಮೂರು ವರ್ಷದಲ್ಲಿ ಯಾವುದೇ ಬಡವನಿಗೆ ಮನೆ ಇಲ್ಲ ಅಂತ ಆಗಬಾರದು. ಅದಕ್ಕಾಗಿ ಎಲ್ಲಾ ಯತ್ನ ಮಾಡುತ್ತೇವೆ. ನಾಡಿನ ಎಲ್ಲ ಜನಾಂಗದ ಅಭಿವೃದ್ಧಿ ನಮ್ಮ ಗುರಿ ಎಂದು ವಿವರಿಸಿದರು. ಎಪಿಎಂಸಿ ಕಾಯ್ದೆಗೆ ಅನೇಕ ಟೀಕೆ ಟಿಪ್ಪಣಿ ಬಂದರೂ, ಜಾರಿಗೆ ತಂದಿದ್ದೇವೆ. ಇದರಿಂದ ರೈತ ಎಲ್ಲಿ ಬೇಕಾದರು ತನ್ನ ಬೆಳೆಯನ್ನು ಮಾರಾಟ ಮಾಡಬಹುದಾಗಿದೆ. ಅದೇ ರೀತಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮೂಲಕ ಬರುವ ದಿನಗಳಲ್ಲಿ ಕೈಗಾರಿಕೆಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸಿಗಲಿದೆ. ಪ್ರತಿಪಕ್ಷಗಳು ಅನಗತ್ಯ ಟೀಕೆ ಮಾಡಬಾರದು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ನಗರ ಆಗಿದೆ. ಇದರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ನೀವೇ ಅಚ್ಚರಿ ಪಡುವ ರೀತಿ ಮೂರು ವರ್ಷಗಳಲ್ಲಿ ಬೆಂಗಳೂರನ್ನು ಸಮಗ್ರ ಅಭಿವೃದ್ಧಿ ಪಡಿಸಲು ಯತ್ನಿಸುತ್ತೇವೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಆಗಿಲ್ಲವೆಂಬ ಅಸಮಾಧಾನ ಇದೆ. ಅದಕ್ಕಾಗಿ ನಂಜುಂಡಪ್ಪ ವರದಿಯನ್ನು ಹೊರತಂದು ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.