ಬೆಂಗಳೂರು :ರಾಜ್ಯದಲ್ಲಿ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಂದು ಗಣಿತ ಹಾಗೂ ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆ ನಡೆದಿದೆ. ಒಟ್ಟು 13,765 ವಿದ್ಯಾರ್ಥಿಗಳು ಗೈರಾಗಿದ್ದು, ಪರೀಕ್ಷಾ ಅಕ್ರಮದ ಆರೋಪದ ಮೇಲೆ 1 ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಪ್ರಥಮ ಭಾಷೆ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಲ್ಲಿ ಶೇ. 98.48 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆದಿಲ್ಲ. ಯಾವ ವಿದ್ಯಾರ್ಥಿಯನ್ನೂ ಡಿಬಾರ್ ಮಾಡಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
ಇಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಎರಡನೇ ದಿನದ ಪರೀಕ್ಷೆ ನಡೆದಿದ್ದು, 100 ಅಂಕಗಳಿಗೆ ನಡೆದ ಗಣಿತ ಮತ್ತು ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಗಣಿತ ಮತ್ತು ಸಮಾಜಶಾಸ್ತ್ರಕ್ಕೆ ನೋಂದಾಯಿಸಿಕೊಂಡಿದ್ದ 8,28,273 ವಿದ್ಯಾರ್ಥಿಗಳಲ್ಲಿ 8,14,508 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 13,765 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ. ಶೇ.98.34 ರಷ್ಟು ಹಾಜರಾತಿ ಇದ್ದು, ಯಾದಗಿರಿಯಲ್ಲಿ ಕನಿಷ್ಠ ಹಾಜರಾತಿ ದಾಖಲಾಗಿದೆ.
ಇಲ್ಲಿ ಶೇ. 96. 17 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಗರಿಷ್ಟ ಹಾಜರಾತಿ ದಾಖಲಾಗಿದ್ದು, ಶೇ.99.80 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಕಲಬುರಗಿಯಲ್ಲಿ ಒಂದು ಡಿಬಾರ್ ಆಗಿದ್ದು ಹೊರತುಪಡಿಸಿದರೆ ಯಾವುದೇ ರೀತಿಯಲ್ಲೂ ಪರೀಕ್ಷಾ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.