ಬೆಂಗಳೂರು: ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಡುಗೆ ಮನೆಯಲ್ಲಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದ ಅಡುಗೆ ಮನೆಗೆ ತೆರಳಿದ ಡಿ.ಕೆ.ಶಿವಕುಮಾರ್ ವಿಶೇಷ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಅಡುಗೆ ಮನೆಯಲ್ಲಿ ಚಹಾ ಸೇವಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಿರುವ ಅವರು, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ 'ಒಂದು ಪ್ರಶ್ನೆ' ಸರಣಿ ವಿಡಿಯೋ ಅಡಿ ಸರ್ಕಾರಕ್ಕೆ ಮತ್ತೊಂದು ಪ್ರಶ್ನೆ ಕೇಳುವ ಕಾರ್ಯ ಮಾಡಿದ್ದಾರೆ. ಎಲ್ಪಿಜಿ ಬೆಲೆ ಇಳಿಕೆಯಾಗಬೇಕಾ? ಎಂಬ ಪ್ರಶ್ನೆ ಮುಂದಿಟ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ನ್ಯಾನೇಕೆ ಅಡುಗೆ ಮನೆಯಲ್ಲಿದ್ದೇನೆ?
ನಾನ್ಯಾಕೆ ಅಡುಗೆ ಮನೆಯಲ್ಲಿದ್ದೀನಿ ಅಂತಾ ನಿಮಗೆ ಆಶ್ಚರ್ಯವಾಗಬಹುದು ಎಂಬ ಮೂಲಕ ಮಾತು ಆರಂಭಿಸಿರುವ ಅವರು, ನಾನು ಮಾತನಾಡುತ್ತಿರುವ ವಿಷಯ ಅಡುಗೆ ಮನೆಗೆ ಸಂಬಂಧಿಸಿದ್ದು. ಈ ವಾರ ನಾನು ಕೇಳುವ ಪ್ರಶ್ನೆ, ಅಡುಗೆ ಅನಿಲ ಬೆಲೆ ಏರಿಕೆಯಾಗಿರುವುದು ಇಳಿಸಬೇಕೇ? ಬೇಡವೇ? ಎಂಬುದು.
ಎಲ್ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯವೇ 900 ರಿಂದ 1000 ರೂಪಾಯಿ ತಲುಪಬಹುದು. ರಾಜ್ಯದ ಜನತೆಗೆ ಎಂತಹ ಸಂಕಷ್ಟ ನೋಡಿ. ಕೋವಿಡ್ನಿಂದಾಗಿ ಜನ ಸಾಯುತ್ತಿದ್ದಾರೆ, ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ರಾಜ್ಯದ ಎಲ್ಲೆಡೆ ನಾನು ಸಂಚರಿಸಿ ಬಂದಿದ್ದೇನೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರನ್ನು ಭೇಟಿಯಾಗಿ ಬಂದಿದ್ದೇನೆ. ಇವರೆಲ್ಲರೂ ಕೂಡ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನರ ಪರಿಸ್ಥಿತಿ ಬಗ್ಗೆ ವಿವರಿಸಿದ ಡಿ ಕೆ ಶಿವಕುಮಾರ್
ಜನರ ಪರಿಸ್ಥಿತಿ ಇಂದು ಯಾವ ಸ್ಥಿತಿ ತಲುಪಿದೆ ಎಂಬ ಬಗ್ಗೆ ವಿವರಿಸಿರುವ ಅವರು, ಬಡ ಕುಟುಂಬದವರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಎರಡೇ. ಮಕ್ಕಳ ಶಾಲೆಗೆ ಫೀಸ್ ಕಟ್ಟಬೇಕಾ ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ ಎಂಬುದಾಗಿದೆ. ಪೋಷಕರು ಉದ್ಯೋಗ ಕಳೆದುಕೊಂಡ ಹಿನ್ನೆಲೆ ಮಕ್ಕಳನ್ನು ಶಾಲೆಯಿಂದ ಬಿಡಿಸಲಾಗುತ್ತದೆ. ನಿರುದ್ಯೋಗದಿಂದ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯವೇ? ಇಲ್ಲವೇ? ಅನ್ನೋದನ್ನು ನೀವೇ ತೀರ್ಮಾನಿಸಬೇಕು.
ಇದನ್ನೂ ಓದಿ: ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಪಡೆದು 1ರಿಂದ 5ನೇ ತರಗತಿ ಪುನಾರಂಭಿಸುವ ಬಗ್ಗೆ ತೀರ್ಮಾನ: ನಾಗೇಶ್
ಗ್ಯಾಸ್ ಸಿಲಿಂಡರ್ಗೆ ಹಣ ಭರಿಸಲಾಗದೇ, ಸಾಕಷ್ಟು ಕುಟುಂಬಗಳು ಸೌದೆ ಒಲೆ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಮುಂದೆ ನನ್ನ ಮನವಿ ಏನೆಂದರೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯನ್ನಾದರೂ ಇಳಿಕೆ ಮಾಡಬೇಕು. ಸಾಮಾಜಿಕ ಜಾಲತಾಣದ ಮೂಲಕ ನೀವು ನಿಮ್ಮ ಉತ್ತರವನ್ನು ನನಗೆ ನೀಡಿ. ನಾನು ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.