ಬೆಂಗಳೂರು : ಮೆಟ್ರೋ ರೈಲು, ಕ್ಯಾಬ್, ಬಸ್ಗಳು ಸೇರಿದಂತೆ ವಿವಿಧ ಮಾದರಿಯ ಸಂಚಾರ ವ್ಯವಸ್ಥೆಗಳಿಗೆ ದೇಶಾದ್ಯಂತ ಒಬ್ಬ ಪ್ರಯಾಣಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಸೌಲಭ್ಯ ಕೇಂದ್ರದಿಂದ ಶೀಘ್ರವೇ ಜಾರಿಯಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.
ಅರಮನೆ ಆವರಣದಲ್ಲಿ ನಡೆಯುತ್ತಿರುವ ʼಬೆಂಗಳೂರು ಟೆಕ್ ಸಮ್ಮಿಟ್ʼನ ಎರಡನೇ ದಿನ ʼಭವಿಷ್ಯದ ಸಂಚಾರಕ್ಕಾಗಿ ಸಮನ್ವಯದ, ಸ್ವಾಯತ್ತ, ಹಂಚಿಕೆಯ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆʼ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಇನ್ನು 6 ತಿಂಗಳಲ್ಲಿ ವಿವಿಧ ಮಹಾನಗರಗಳಲ್ಲಿ ಜಾರಿಗೊಳ್ಳಲಿದೆ. ಪರಿಸರಸ್ನೇಹಿ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಮೆಟ್ರೊ ರೈಲು ನಿಲ್ದಾಣಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ʼಊಬರ್ ಇಂಡಿಯಾʼ ಸಂಸ್ಥೆಯ ನಿರ್ದೇಶಕ ಸಂಜಯ್ ಛಡ್ಡಾ, ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯಾಣವು ಕ್ಯಾಬ್ ನಿಂದ ಬಸ್ ಗಳಿಗೆ ಬದಲಾಗಬೇಕು. ಈ ನಿಟ್ಟಿನಲ್ಲಿ ಊಬರ್ ಸಂಸ್ಥೆಯಿಂದ ಈಗಾಗಲೇ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ವ್ಯವಸ್ಥೆ ಆರಂಭಿಸಲಾಗಿದೆ. ಬೆಂಗಳೂರಿನಲ್ಲೂ ಶೀಘ್ರವೇ ಈ ಸೌಲಭ್ಯ ದೊರಕಿಸಲಾಗುವುದು. 2030ರ ವೇಳೆಗೆ ಊಬರ್ ಬುಕಿಂಗ್ ವ್ಯವಸ್ಥೆಯಲ್ಲಿ ಶೇಕಡಾ 100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನೇ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅಂಜುಮ್ ಪರ್ವೇಜ್ ವಿವರಿಸಿದರು.