ಬೆಂಗಳೂರು: ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರ ವಿಧಾನ ಪರಿಷತ್ನಲ್ಲಿ ದೊಡ್ಡ ಗದ್ದಲದ ವಾತಾವರಣ ನಿರ್ಮಿಸಿತು. ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಭೋಜನ ವಿರಾಮದ ಬಳಿಕ ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವನ್ನು ಕೈಗೆತ್ತಿಕೊಂಡರು. ಆದರೆ ಇದಕ್ಕೆ ಪ್ರತಿಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು.
ಆಡಳಿತ ಪಕ್ಷದ ಪರವಾಗಿ ಹಿರಿಯ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಇಂತಹ ಮಹತ್ವದ ವಿಚಾರ ಚರ್ಚೆ ಆಗಬೇಕು ಎಂದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಸೇರಿದಂತೆ ಕಾಂಗ್ರೆಸ್ನ ಎಲ್ಲಾ ಸದಸ್ಯರು ಈ ವಿಚಾರದ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು. ಪರ-ವಿರೋಧವಾಗಿ ಸಾಕಷ್ಟು ಚರ್ಚೆ ನಡೆದವು.
ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಚರ್ಚೆ ನಿರ್ಧಾರವಲ್ಲ. ಹೊಸ ವಿಚಾರ, ಚರ್ಚೆ ಬಂದಾಗ ಪರ ವಿರೋಧ ಚರ್ಚೆ ಸಾಧ್ಯ. ಆದರೆ ಚರ್ಚೆ ಮಾಡೋಣ, ಅಭಿಪ್ರಾಯ ವ್ಯಕ್ತವಾಗಲಿ. ಚರ್ಚೆ ಮೂಲಕ ಅಭಿಪ್ರಾಯ ಹೇಳೋಣ, ನಿರ್ಧಾರ ಇಲ್ಲಾಗುವುದಲ್ಲ. ಹೊಸ ವಿಚಾರದ ಬಗ್ಗೆ ವಿವಿಧ ಮಾಹಿತಿ ಹೊರ ಬೀಳಲಿ ಎಂದರು.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಒಂದು ರಾಷ್ಟ್ರ, ಒಂದು ಚುನಾವಣೆ ನಡೆಸುವುದು ಸುಲಭ ಅಲ್ಲ. 1952 ರಿಂದ 1967ರವರೆಗೂ ಈ ವ್ಯವಸ್ಥೆ ಇತ್ತು. ಒಂದು ದೇಶ, ಒಂದು ಚುನಾವಣೆಗೆ ರಾಜ್ಯಗಳ ಬೆಂಬಲ ಇಲ್ಲ. ಅನಗತ್ಯ ಸಮಯ ವ್ಯರ್ಥ ಬೇಡ ಎಂದು ಹೇಳಿದರು.